×
Ad

ಸೊಮಾಲಿಯ ರೆಸ್ಟೋರೆಂಟ್ ಮೇಲೆ ಉಗ್ರರ ದಾಳಿ: 20 ಸಾವು

Update: 2016-01-22 23:05 IST

ಮೊಗಾದಿಶು (ಸೊಮಾಲಿಯ), ಜ. 22: ಸೊಮಾಲಿಯ ರಾಜಧಾನಿ ಮೊಗಾದಿಶುವಿನಲ್ಲಿರುವ ಜನಪ್ರಿಯ ಸಮುದ್ರ ತೀರದ ರೆಸ್ಟೋರೆಂಟೊಂದರ ಮೇಲೆ ಅಲ್-ಶಬಾಬ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.

‘‘ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅವರು ಸುಮಾರು 20 ಮಂದಿಯನ್ನು ಕೊಂದರು’’ ಎಂದು ಸೊಮಾಲಿಯದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮೊಗಾದಿಶುವಿನಲ್ಲಿರುವ ಲಿಡೊ ಬೀಚ್ ಪ್ರದೇಶದಲ್ಲಿ ಹಲವಾರು ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳಿವೆ. ಉದ್ಯಮಿಗಳು ಮತ್ತು ವಿದೇಶಗಳಿಂದ ವಾಪಸಾಗುವ ಸೊಮಾಲಿ ಪ್ರಜೆಗಳು ಹೆಚ್ಚಾಗಿ ಅಲ್ಲಿಗೆ ಹೋಗುತ್ತಾರೆ.
ಸೊಮಾಲಿಯದ ವಾರಾಂತ್ಯ ಆರಂಭವಾದ ಗುರುವಾರ ಸಂಜೆ ಜನರು ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗ ಕಾಣಿಸಿಕೊಂಡ ಐವರು ಬಂದೂಕುಧಾರಿಗಳು ಮೊದಲು ಬಾಂಬೊಂದನ್ನು ಸ್ಫೋಟಿಸಿದರು. ಬಳಿಕ ಒಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಕೊಂದು ಓರ್ವನನ್ನು ಸೆರೆಹಿಡಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News