×
Ad

ಜೊತೆಯಾಗಿ ತಾಲಿಬಾನ್ ಎದುರಿಸಿ: ಪಾಕ್, ಅಫ್ಘಾನ್‌ಗೆ ಅಮೆರಿಕ ಕರೆ

Update: 2016-01-22 23:18 IST

ವಾಶಿಂಗ್ಟನ್, ಜ. 22: ತಾಲಿಬಾನ್ ಒಡ್ಡಿರುವ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಜೊತೆಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಶ್ವೇತಭವನ ಹೇಳಿದೆ.
 ಪಾಕಿಸ್ತಾನದ ವಿಶ್ವವಿದ್ಯಾನಿಲಯವೊಂದರಲ್ಲಿ ತಾಲಿಬಾನ್ ಭಯೋತ್ಪಾದಕರು 21 ಮಂದಿಯನ್ನು ಹತ್ಯೆ ಮಾಡಿದ ಒಂದು ದಿನದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡೂ ದೇಶಗಳಿಗೆ ತಾಲಿಬಾನ್ ಭದ್ರತಾ ಬೆದರಿಕೆಯಾಗಿದೆ ಹಾಗೂ ಈ ಎರಡೂ ದೇಶಗಳ ನಡುವೆ ಪರಿಣಾಮಕಾರಿ ಸಹಕಾರ ಏರ್ಪಟ್ಟರೆ, ಈ ಬೆದರಿಕೆಯನ್ನು ಹೆಚ್ಚು ಸಮರ್ಥವಾಗಿ ಎದುರಿಸಲು ಈ ಎರಡು ದೇಶಗಳಿಗೆ ಸಾಧ್ಯವಾಗುತ್ತದೆ ಎಂಬ ತೀರ್ಮಾನಕ್ಕೆ ನಾವಿಲ್ಲಿ ಬಂದಿದ್ದೇವೆ’’ ಎಂದು ಅವರು ಹೇಳಿದರು.
ಅಫ್ಘಾನಿಸ್ತಾನ ಸರಕಾರ ಮತ್ತು ತಾಲಿಬಾನ್ ನಡುವಿನ ಶಾಂತಿ ಮಾತುಕತೆಗೆ ಅಮೆರಿಕ ಹಿಂದಿನಿಂದಲೂ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದೆ ಎಂದು ಅರ್ನೆಸ್ಟ್ ತಿಳಿಸಿದರು.
ಈ ಎರಡು ದಕ್ಷಿಣ ಏಶ್ಯದ ದೇಶಗಳ ನಡುವೆ ಹೆಚ್ಚಿನ ಸಹಕಾರವನ್ನು ಏರ್ಪಡಿಸಲು ಅಮೆರಿಕ ಉತ್ಸುಕವಾಗಿದೆ ಎಂದರು.
ಇದರ ಭಾಗವಾಗಿ, ಅಮೆರಿಕದ ಉಪಾಧ್ಯಕ್ಷ ಜೋ ಬೈಡನ್ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಜೊತೆಗೆ ಸ್ವಿಝರ್‌ಲ್ಯಾಂಡ್‌ನ ಡಾವೋಸ್‌ನಲ್ಲಿ ಗುರುವಾರ ತ್ರಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪ್ರಸಕ್ತ ಡಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News