ಪಶ್ಚಿಮ ದಂಡೆಯಿಂದ ಯಹೂದಿ ನಿವಾಸಿಗಳ ತೆರವು: ಬಲಪಂಥೀಯ ಇಸ್ರೇಲ್ ಸಂಸದರ ವಿರೋಧ
ಜೆರುಸಲೇಂ, ಜ. 22: ಪಶ್ಚಿಮ ದಂಡೆಯ ನಗರ ಹೆಬ್ರಾನ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ಯಹೂದಿ ನಿವಾಸಿಗಳನ್ನು ಇಸ್ರೇಲ್ ಪಡೆಗಳು ಶುಕ್ರವಾರ ಬಲವಂತವಾಗಿ ತೆರವುಗೊಳಿಸಿದವು. ಇದಕ್ಕೆ ಪ್ರತಿರೋಧ ವ್ಯಕ್ತಿಪಡಿಸಿದ ನಿವಾಸಿಗಳು, ತಾವು ಈ ಮನೆಗಳನ್ನು ಫೆಲೆಸ್ತೀನೀಯರಿಂದ ಖರೀದಿಸಿದ್ದೇವೆ ಎಂದು ಹೇಳಿಕೊಂಡರು.
ಈ ಘರ್ಷಣೆಯ ಬೆನ್ನಿಗೇ, ರಂಗಕ್ಕಿಳಿದ ಕೆಲವು ಬಲಪಂಥೀಯ ಇಸ್ರೇಲ್ ಸಂಸದರು, ಯಹೂದಿಯರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದರೆ ಸರಕಾರಕ್ಕೆ ನೀಡುವ ಬೆಂಬಲವನ್ನು ಹಿಂದಕ್ಕೆ ಪಡೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಇಸ್ರೇಲಿಗರು ಮತ್ತು ಫೆಲೆಸ್ತೀನೀಯರ ನಡುವೆ ಭಾರೀ ಉದ್ವಿಗ್ನತೆ ಕಾಣಿಸಿಕೊಳ್ಳುವ ಹೆಬ್ರಾನ್ ನಗರದಲ್ಲಿ, ಯಹೂದಿಗಳು ಖರೀದಿಸಿದ್ದಾರೆನ್ನಲಾದ ಮನೆಗಳಲ್ಲಿ ವಾಸಿಸಲು ಅನುಮೋದನೆ ನೀಡಲು ಇಸ್ರೇಲ್ ರಕ್ಷಣಾ ಸಚಿವ ಮೋಶೆ ಯಾಲನ್ ನಿರಾಕರಿಸಿರುವುದು ಗಮನಾರ್ಹವಾಗಿದೆ.
ರಕ್ಷಣಾ ಸಚಿವರ ಈ ನಿಲುವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಲಿಕುಡ್ ಪಕ್ಷದ ಸಚಿವರು ಮತ್ತು ಸಂಸದರು ಟೀಕಿಸಿದ್ದಾರೆ.
ಫೆಲೆಸ್ತೀನ್ ಮಾಲಕರಿಂದ ತಾವು ಕಾನೂನುಬದ್ಧವಾಗಿ ಮನೆಗಳನ್ನು ಖರೀದಿಸಿರುವುದಾಗಿ ಯಹೂದಿ ನಿವಾಸಿಗಳು ಹೇಳಿಕೊಂಡಿದ್ದಾರೆ. ಆದರೆ, ಹೀಗೆ ಖರೀದಿಸಲಾದ ಮನೆಗಳಲ್ಲಿ ವಾಸಿಸಲು ಅವರಿಗೆ ರಕ್ಷಣಾ ಸಚಿವಾಲಯದ ಅನುಮೋದನೆ ಬೇಕಾಗಿದೆ. ಮನೆ ಖರೀದಿ ವ್ಯವಹಾರದಲ್ಲಿ ನಿವಾಸಿಗಳು ಕಾನೂನು ಪಾಲಿಸಿಲ್ಲ ಎಂದು ಮೋಶೆ ಹೇಳಿದ್ದಾರೆ.
ಪಶ್ಚಿಮ ದಂಡೆಯ ದಕ್ಷಿಣದಲ್ಲಿರುವ ನಗರ ಹೆಬ್ರಾನ್‌ನಲ್ಲಿ ಸುಮಾರು 2.2 ಲಕ್ಷ ಫೆಲೆಸ್ತೀನಿಯರು ವಾಸಿಸುತ್ತಿದ್ದಾರೆ. ನಗರದ ಕೇಂದ್ರ ಭಾಗದಲ್ಲಿ ಸುಮಾರು 1,000 ಯಹೂದಿಗಳೂ ವಾಸಿಸುತ್ತಿದ್ದಾರೆ. ಹಾಗಾಗಿ, ಇದು ಹಿಂದಿನಿಂದಲೂ ಘರ್ಷಣೆಯ ಕೇಂದ್ರ ಬಿಂದುವಾಗಿದೆ. ಇಲ್ಲಿ ನೆಲೆಸಿರುವ ಯಹೂದಿ ನಿವಾಸಿಗಳಿಗೆ ಇಸ್ರೇಲ್ ಸೇನೆ ರಕ್ಷಣೆ ನೀಡುತ್ತಿದೆ.