ಚುಟುಕು ಸುದ್ದಿಗಳು
ಪಾಸ್‌ಪೋರ್ಟ್ ಕುರಿತು ಮಾಹಿತಿ ಶಿಬಿರ
ಕೊಣಾಜೆ, ಜ.22: ಪಾಸ್‌ಪೋರ್ಟ್ ಕೇವಲ ವಿದೇಶ ಪ್ರಯಾಣಕ್ಕೆ ಮಾತ್ರ ಅಗತ್ಯ ದಾಖಲೆಯಲ್ಲ, ಬದಲಾಗಿ ಹಲವು ಸೌಲಭ್ಯಗಳನ್ನು ಪಡೆಯಲು, ಉದ್ಯೋಗ ನೇಮಕಾತಿ, ವಿದೇಶ ವ್ಯಾಸಂಗದಂತಹ ಸಂದರ್ಭಗಳಲ್ಲಿ ಪಾಸ್‌ಪೋರ್ಟ್ ಅತೀ ಮುಖ್ಯ ಎಂದು ಅರುಣ್ ಪ್ರಸಾದ್ ರೈ ಮಾಹಿತಿ ನೀಡಿದರು.
ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾರ್ಗದರ್ಶನ ಹಾಗೂ ವೃತ್ತಿ ನಿಯೋಜನಾ ಕೋಶದ ಆಶ್ರಯದಲ್ಲಿ ನಡೆದ ಮಾಹಿತಿ ಶಿಬಿರದಲ್ಲಿ ಪಾನ್‌ಕಾರ್ಡ್ ಪಡೆದುಕೊಳ್ಳುವ ವಿಧಾನ ಹಾಗೂ ಅದರ ಉಪಯೋಗಗಳು, ಪಾನ್‌ಕಾರ್ಡ್ ಕಳೆದು ಹೋದಲ್ಲಿ ಅನುಸರಿಸಬೇಕಾದ ಕ್ರಮಗಳು, ವಿದೇಶ ಪ್ರಯಾಣ, ವಿದೇಶ ವ್ಯಾಸಂಗದಂತಹ ಸಂದರ್ಭದಲ್ಲಿ ಪಾಸ್‌ಪೋರ್ಟ್‌ನ ಪ್ರಾಮುಖ್ಯತೆ, ತುರ್ತಾಗಿ ಪಾಸ್‌ಪೋರ್ಟ್ ಪಡೆದುಕೊಳ್ಳುವ ವಿಧಾನಗಳ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಉದ್ಯೋಗ ಮಾರ್ಗದರ್ಶನ ಕೋಶದ ಸಂಚಾಲಕ ನಂದಕಿಶೋರ್ ಎಸ್. ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಗಿರಿಧರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಇಂದಿನಿಂದ ಬ್ರಹ್ಮಕಲಶೋತ್ಸವ
ಮೂಡುಬಿದಿರೆ, ಜ.22: ಶ್ರೀ ದಿಗಂಬರ ಜೈನ ಮಂದಿರ ಟ್ರಸ್ಟ್ ಕೊಣಾಜೆ ಇದರ ವತಿಯಿಂದ ಜ.23ರಂದು ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಹಾಗೂ ಪಡುಕೊಣಾಜೆ ಬಳ್ಳಾಲಗುತ್ತು ಶ್ರೀವರಮಹಾಲಕ್ಷ್ಮೀ ಮತ್ತು ನವಗ್ರಹ ದೇವಸ್ಥಾನದಲ್ಲಿ ಜ.24ರಂದು ಬ್ರಹ್ಮಕಲಶೋತ್ಸವ ಜರಗಲಿದೆ ಎಂದು ಟ್ರಸ್ಟ್‌ನ ಟ್ರಸ್ಟಿನ ಪದ್ಮರಾಜ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀವರ್ಚನದೊಂದಿಗೆ ಧಾರ್ಮಿಕ ವಿಧಿ-ವಿಧಾನಗಳ ಸಹಿತ ಪಂಚಕಲ್ಯಾಣ ಮಹೋತ್ಸವ ಬಳ್ಳಾಲಗುತ್ತುವಿನಲ್ಲಿ ಜರಗಲಿದೆ. ನಾಳೆ ಬಾಬುರಾಯ ಆಚಾರ್ ಜನ್ಮಶತಮಾನೋತ್ಸವ
ಮಂಗಳೂರು, ಜ.22: ವಿಶ್ವಬ್ರಾಹ್ಮಣ ಸಮಾಜದ ಹಿರಿಯ ಸೇವಾ ಸಂಸ್ಥೆ ಕಾಳಿಕಾಂಬಾ ಪ್ರಸಾದಿತ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ಮಂಗಳೂರು ಇದರ ವತಿಯಿಂದ ವಿಶ್ವಕರ್ಮ ಕುಲೋದ್ಧಾರಕ-ದೇವಮಾನವಪಾಲ್ಕೆ ಬಾಬುರಾಯ ಆಚಾರ್‌ರ ಜನ್ಮ ಶತಮಾನೋತ್ಸವ ಸಮಾರಂಭ ಜ.24ರಂದು ಸಂಜೆ 5ಕ್ಕೆ ಮಂಗಳೂರಿನ ಟಿ.ವಿ.ರಮಣ ಪೈ ಕನ್ವೆನ್‌ಶನ್ ಸೆಂಟರ್‌ನಲ್ಲಿ ಜರಗಲಿದೆ.
ಡಾ.ಎಂ. ವೀರಪ್ಪಮೊಯ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೆ. ಅಭಯಚಂದ್ರ ಜೈನ್, ಶಾಸಕ ಜೆ.ಆರ್. ಲೋಬೊ, ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಮೋಹನ ಆಳ್ವ ಅತಿಥಿಗಳಾಗಿ ಭಾಗವಹಿಸುವರು.
ನಾಳೆಯಿಂದ ನೂತನ ಧ್ವಜ ಸ್ತಂಭ ಪ್ರತಿಷ್ಠೆ
ಮಂಗಳೂರು, ಜ.22: ಇತಿಹಾಸ ಪ್ರಸಿದ್ಧ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಅಷ್ಟಮಂಗಲ ದೇವ ಪ್ರಶ್ನೆ ನಿರ್ದೇಶನದಂತೆ ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈಧಿಕ ವಿಧಿ ವಿಧಾನಗಳೊಂದಿಗೆ ವಾಸ್ತುಕೀರ್ತಿ ಮಹೇಶ್ ಭಟ್ ಮುನಿಯಂಗಳರ ಉಪಸ್ಥಿತಿಯಲ್ಲಿ ಜ.24ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನೂತನ ಧ್ವಜ ಸ್ತಂಭ ಪ್ರತಿಷ್ಠೆ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಜ.25: ಮತದಾರರ ದಿನಾಚರಣೆ
ಉಡುಪಿ, ಜ.22: ಉಡುಪಿ ಜಿಲ್ಲಾ ಚುನಾವಣಾಧಿಕಾರಿಗಳ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯು ಜ.25ರಂದು ಬೆಳಗ್ಗೆ 10 ಗಂಟೆಗೆ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ.
ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಅಧ್ಯಕ್ಷತೆ ವಹಿಸುವರು. ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ., ಉಡುಪಿ ತಹಶೀಲ್ದಾರ್ ಟಿ.ಜಿ ಗುರುಪ್ರಸಾದ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಕಾಸರಗೋಡು ಬೀಚ್‌ಗಳಲ್ಲಿ ಸುರಕ್ಷಾ ವ್ಯವಸ್ಥೆ: ಡಿಸಿ
ಕಾಸರಗೋಡು, ಜ.22: ಜಿಲ್ಲೆಯ ಬೀಚ್‌ಗಳಲ್ಲಿ ಸಮಗ್ರ ಸುರಕ್ಷಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎಸ್ ಮುಹಮ್ಮದ್ ಸಗೀರ್ ತಿಳಿಸಿದ್ದಾರೆ.
ವಲಿಯಪರಂಬದಿಂದ ಮಂಜೇಶ್ವರದ ಕಣ್ವತೀರ್ಥ ತನಕದ ಕಡಲ ತೀರದಲ್ಲಿ ಸುರಕ್ಷಾ ವ್ಯವಸ್ಥೆಗೆ ರೂಪು ನೀಡಲಾಗಿದ್ದು, ಮೊದಲ ಹಂತದಲ್ಲಿ ಬೇಕಲ ಮತ್ತು ಕಾಸರಗೋಡು ಕಡಲ ತೀರದಲ್ಲಿ ಸುರಕ್ಷಾ ವ್ಯವಸ್ಥೆ ಜಾರಿಗೆ ತರಲಾಗುವುದು. ರಾಷ್ಟ್ರೀಯ ದುರಂತ ನಿವಾರಣಾ ಪ್ರಾಧಿಕಾರದ ಅನುದಾನವನ್ನು ಇದಕ್ಕಾಗಿ ಬಳಸಲಾಗುವುದು. ಲೈಫ್ ಜಾಕೆಟ್, ದುರಂತ ಮುನ್ನೆಚ್ಚರಿಕಾ ಅಲರಾಂ, ಬೈನಾಕೂಲರ್, ಎಲ್‌ಇಡಿ ಬೆಳಕಿನ ವ್ಯವಸ್ಥೆ, ಮುಂಜಾಗ್ರತಾ ಫಲಕಗಳು ಅಳವಡಿಸಲಾಗುವುದು. ಭಾರತೀಯ ನೌಕಾ ಪಡೆಯ ನೆರವಿನೊಂದಿಗೆ ಯುವಕ ಯುವತಿಯರಿಗೆ ಈಜು ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.
‘ವಿಜಯ ಕಲಾವಿದರು’ ತಂಡದಿಂದ ಕಾರ್ಯಕ್ರಮ
ಕಿನ್ನಿಗೋಳಿ, ಜ.22: ಕಿನ್ನಿಗೋಳಿಯ ‘ವಿಜಯ ಕಲಾವಿದರು’ ತುಳು ನಾಟಕ ಸಂಸ್ಥೆಯ 10ನೆ ವರ್ಷದ ಮುಂಬೈ ಪ್ರವಾಸ ಜ.24ರಿಂದ ಪ್ರಾರಂಭಗೊಳ್ಳಲಿದೆ ಎಂದು ವಿಜಯ ಕಲಾವಿದರು ಸಂಸ್ಥೆಯ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ ಹೇಳಿದರು.
ಜ.24ರಂದು ಸಂಜೆ 6ಕ್ಕೆ ಮಾಟುಂಗಾದ ವಿಶ್ವೇಶ್ಯರಯ್ಯ ಸಭಾಗೃಹದಲ್ಲಿ ಪ್ರಸಾದ್ ಶೆಟ್ಟಿ ಕೂಟ್ರಪಾಡಿಯ ಸಂಯೋಜನೆಯಲ್ಲಿ ಪ್ರಥಮ ಪ್ರದರ್ಶನ ನಡೆಯಲಿದೆ. ಜ.29ರಂದು ಅಪರಾಹ್ನ 3ಕ್ಕೆ ದಶಮಾನೋತ್ಸವದ ಕಾರ್ಯಕ್ರಮ ನಡೆಯಲಿದೆ. ಜ.31ರವರೆಗೆ ಮುಂಬೈ ಹಾಗೂ ಪೂನಾದ ವಿವಿಧೆಡೆ ನಾಟಕ ಪ್ರದರ್ಶನಗೊಳ್ಳಲಿದೆ.ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ, ಸಂಚಾಲಕ ಸಾಯಿನಾಥ ಶೆಟ್ಟಿ, ಕಾರ್ಯದರ್ಶೀ ಲಕ್ಷ್ಮಣ ಬಿ.ಬಿ., ಸುಧಾಕರ ಸಾಲ್ಯಾನ್ ಉಪಸ್ಥಿತರಿದ್ದರು.
ನಂತೂರು ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರ: ಸಿಪಿಎಂ ಸ್ವಾಗತ
ಮಂಗಳೂರು,ಜ.22: ರಸ್ತೆ ಅಗಲೀಕರಣದ ನೆಪವೊಡ್ಡಿ ಒಕ್ಕಲೆಬ್ಬಿಸಲಾದ ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ನಿರ್ಧರಿಸಿರುವ ಸರಕಾರದ ಕ್ರಮವನ್ನು ಸಿಪಿಎಂ ಸ್ವಾಗತಿಸಿದೆ.
ಎಂಟು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆದಿವಾಸಿ ಕುಟುಂಬಗಳನ್ನು ರಸ್ತೆ ಅಗಲೀಕರಣದ ನೆಪವೊಡ್ಡಿ ಒಕ್ಕಲೆಬ್ಬಿಸಲು ಪ್ರಯತ್ನಿಸಿತು. ಈ ಬಗ್ಗೆ ಸಿಪಿಎಂ ಪಕ್ಷವು ಮಧ್ಯ ಪ್ರವೇಶಿಸಿ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಹೋರಾಟ ನಡೆಸಿತ್ತು ಎಂದು ಪ್ರಕಟನೆ ತಿಳಿಸಿದೆ.
ಪಡುಬಿದ್ರೆಗೆ ಪ್ಯಾಟ್ ಫಾರ್ಮರ್
ಉಡುಪಿ, ಜ.22: ಆಸ್ಟ್ರೇಲಿಯಾ ಸರಕಾರದ ಮಾಜಿ ಶಿಕ್ಷಣ ಹಾಗೂ ಕ್ರೀಡಾ ಸಹಾಯಕ ಸಚಿವ ಪ್ಯಾಟ್ ಫಾರ್ಮರ್ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಕಾಲ್ನಡಿಗೆಯಲ್ಲಿ ಸ್ಪಿರಿಟ್‌ಆಫ್ ಇಂಡಿಯಾ ರನ್-2016 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಫೆ.4ರಂದು ಪಡುಬಿದ್ರೆಗೆ ಆಗಮಿಸುವ ಇವರು ಮರುದಿನ ಮರವಂತೆ ಮೂಲಕ ಕಾಲ್ನಡಿಗೆಯನ್ನು ಮುಂದುವರಿಸುವರು ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
ಕೆವಿಜಿ ಕಾಲೇಜಿನಿಂದ ಹರ್ಬಲ್ ಗಾರ್ಡನ್ ಸ್ಥಾಪನೆ
ಸುಳ್ಯ, ಜ.22: ಸಾರ್ವಜನಿಕ ಆರೋಗ್ಯ ಹಿತಾಸಕ್ತಿಯಿಂದ ಸುಳ್ಯದ ಜಟ್ಟಿಪಳ್ಳ ಅನ್ಸಾರಿಯಾ ಯತೀಂಖಾನ ಬಳಿ ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜಿನ ವತಿಯಿಂದ ನಿರ್ಮಿಸಲಾದ ಹರ್ಬಲ್ ಗಾರ್ಡನ್ ಅನ್ನು ಡಾ.ಕೆ.ವಿ.ಚಿದಾನಂದ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜಿನ ಆಡಳಿತಾಧಿಕಾರಿ ಡಾ. ಲೀಲಾಧರ್, ವಿನಯ್ ಬೆದ್ರುಪಣೆ ಉಪಸ್ಥಿತರಿದ್ದರು.
ಪ್ರವಾದಿ ಜೀವನ ಮತ್ತು ಸಂದೇಶ ಪರಿಚಯ ಕಾರ್ಯಕ್ರಮ
ಉಳ್ಳಾಲ, ಜ.22: ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ಇತ್ತೀಚೆಗೆ ಉಳ್ಳಾಲ ಪೇಟೆಯ ಬೋರ್ಡ್ ಹೈಸ್ಕೂಲ್‌ಗೆ ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶ ಪರಿಚಯದ ಪ್ರಯುಕ್ತ 2 ಗೋಡೆ ಗಡಿಯಾರಗಳನ್ನು ಹಾಗೂ ಶಾಲೆಯ ಶಿಕ್ಷಕ- ಶಿಕ್ಷಕಿಯರಿಗೆ ಪ್ರವಾದಿ ಜೀವನ ಮತ್ತು ಸಂದೇಶ ಎಂಬ ಪುಸ್ತಕವನ್ನು ನೀಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ಜೊತೆ ಕಾರ್ಯದರ್ಶಿ ಅಹ್ಮದ್ ಶರೀಫ್ ಪ್ರವಾದಿ ಮುಹಮ್ಮದ್(ಸ.)ರವರ ಜೀವನ ಮತ್ತು ಸಂದೇಶವನ್ನು ಪರಿಚಯ ಪಡಿಸಿದರು. ಶಾಲಾಡಳಿತ ಮಂಡಳಿ ಹಾಗೂ ಉಳ್ಳಾಲ ಮೇಲಂಗಡಿಯ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಶಾಲಾಡಳಿತ ಮಂಡಳಿಯ ಸದಸ್ಯರಾದ ಅಬ್ದುರ್ರಹ್ಮಾನ್, ಸಂಸುದ್ದೀನ್ ಬಿ.ಕೆ. ಉಪಸ್ಥಿತರಿದ್ದರು.
ಭದ್ರಗಿರಿ: ಪದಾಧಿಕಾರಿಗಳ ಆಯ್ಕೆ
ಬ್ರಹ್ಮಾವರ, ಜ.22: ಭದ್ರಗಿರಿ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಅಲ್ ಅಮೀನ್ ಯಂಗ್‌ಮೆನ್ಸ್ ಸೋಸಿಯೇಶನ್‌ನ ಮಹಾಸಭೆಯು ಇತ್ತೀಚೆಗೆ ಮಸೀದಿಯಲ್ಲಿ ಜರಗಿತು.
ಮಸೀದಿಯ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಬ್ದುರ್ರಹ್ಮಾನ್ ಸಅದಿ ಉಪಸ್ಥಿತರಿದ್ದರು.2016-17ನೆ ಸಾಲಿನ ನೂತನ ಗೌರವಾಧ್ಯಕ್ಷರಾಗಿ ಮುಹಮ್ಮದ್ ರಫೀಕ್, ಅಧ್ಯಕ್ಷರಾಗಿ ಸೈಯದ್ ಅನೀಶ್, ಉಪಾಧ್ಯಕ್ಷರಾಗಿ ಮುಹಮ್ಮದ್ ಫೈಝಲ್‌ರವರನ್ನು ಆಯ್ಕೆ ಮಾಡಲಾಯಿತು.