ಮಾನವ ಹಕ್ಕುಗಳ ಸಮಿತಿಯಿಂದ ಅನಾರೋಗ್ಯ ಪೀಡಿತ ವೃದ್ಧೆ ಆಸ್ಪತ್ರೆಗೆ ದಾಖಲು
ಪಡುಬಿದ್ರೆ, ಜ.22: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 63 ವರ್ಷದ ವೃದ್ಧೆಯೊಬ್ಬರನ್ನು ಉಡುಪಿ ಜಿಲ್ಲಾ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಸದಸ್ಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನಾ ಗ್ರಾಮದ ಕುರ್ಕಿಲ್‌ಬೆಟ್ಟು ಕೇದಗೆ ಎಂಬಲ್ಲಿ ಬಿಡು ಒಕ್ಕಲು ಜಾಗದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಶಾಂತಾ ಶೆಡ್ತಿ(63) ಎಂಬವರು ತೀವ್ರ ತರವಾದ ಕರುಳಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಸಾಲದೆ ಮನೆಯಲ್ಲೇ ವಾಸಿಸುತ್ತಿದ್ದರು. ಶಾಂತಾ ಶೆಡ್ತಿಯವರ ದುರವಸ್ಥೆ ಕಂಡು ಸ್ಥಳೀಯ ರಿಕ್ಷಾ ಚಾಲಕ ಗಣೇಶ್ ಮೂಲ್ಯರವರು ಕಳೆದ ಹಲವು ಸಮಯದಿಂದ ಚಿಕಿತ್ಸೆ ಕೊಡಿಸುತ್ತಾ ಸಾಕಿ ಸಲಹಿದ್ದರು. ಕಾಯಿಲೆ ತೀವ್ರಗೊಂಡ ಕಾರಣ ಶಾಂತಾ ಶೆಟ್ಟಿಯವರನ್ನು ಅವರ ಮಗಳ ಬಳಿ(ಮುಂಬೈಗೆ) ಕಳಿಸಿದ್ದರು. ಕಳೆದ ತಿಂಗಳವರೆಗೆ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಶಾಂತಾ ಶೆಟ್ಟಿಯವರ ಮಗಳು ಸುಕನ್ಯಾರವರು ತೀವ್ರ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದು, ತಾಯಿಗೆ ಚಿಕಿತ್ಸೆ ಕೊಡಿಸಲು ಅಸಹಾಯಕರಾಗಿದ್ದರು. ಸುಕನ್ಯಾರ ಪತಿಯೂ ಕಾಯಿಲೆ ಪೀಡಿತರಾಗಿದ್ದು, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಶಾಂತಾ ಶೆಡ್ತಿಯವರನ್ನು ಮರಳಿ ಇನ್ನಾಕ್ಕೆ ಕಳುಹಿಸಿಕೊಟ್ಟಿದ್ದರು. ಇದೀಗ ಕಾಯಿಲೆ ಉಲ್ಬಣಗೊಂಡ ಕಾರಣ ಅವರನ್ನು ಸಲಹುತ್ತಿದ್ದ ಗಣೇಶ್ ಮೂಲ್ಯರಿಗೂ ಸಮಸ್ಯೆಯಾಗಿತ್ತು.
ಈ ಬಗ್ಗೆ ಸಮಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನಾರವರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಮನೆಗೆ ತೆರಳಿ 108 ಆ್ಯಂಬುಲೆನ್ಸ್ ತರಿಸಿ ಶಾಂತಾ ಶೆಟ್ಟಿಯವರನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಡುಪಿ ಜಿಲ್ಲಾ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಕಾಡುಪ್ರದೇಶವಾಗಿದ್ದ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯೇ ಇಲ್ಲ. ರಾತ್ರಿ 7 ಗಂಟೆಯ ಬಳಿಕ ಶೌಚಕ್ಕಾಗಿ ಹೊರಬರುವುದಂತೂ ಅಸಾಧ್ಯ. ಚಿರತೆ ಸಹಿತ ಕಾಡು ಪ್ರಾಣಿಗಳ ಹಾವಳಿ ಇದೆ. ಈ ಎಲ್ಲಾ ತೊಂದರೆ ಮನಗಂಡು ಸಮಿತಿ ಅವರ ಸಹಾಯಕ್ಕೆ ಬಂದಿದೆ. ನಾವು ಆದಷ್ಟು ಸಹಾಯ ಮಾಡಲು ಬದ್ಧರಾಗಿದ್ದೇವೆ ಎಂದರು.
ರಿಕ್ಷಾ ಚಾಲಕ ಗಣೇಶ್ ಮೂಲ್ಯಾ, ಮಾನವ ಹಕ್ಕುಗಳ ಸಮಿತಿ ಸದಸ್ಯರುಗಳಾದ ಚಂದ್ರಿಕಾ ಶೆಟ್ಟಿ, ರೇಷ್ಮಾ ಉದಯ ಶೆಟ್ಟಿ, ನಿತೇಶ್ ಶೆಟ್ಟಿ, ಶೇಖರ ಶೆಟ್ಟಿ ಇನ್ನಾ, ಬೆಳ್ಮಣ್ಣು ಲಯನ್ಸ್ ಅಧ್ಯಕ್ಷ ವಿಶ್ವನಾಥ ಪಾಟ್ಕರ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.