ಸುಳ್ಯ : ಸುಳ್ಯದಲ್ಲಿ ಕಾವ್ಯ ಕಾವೇರಿ ಕಾವಿ ಕುಟೀರದ ಉದ್ಘಾಟನೆ
- ಗೀರು ಶಿಲ್ಪ ರಚನೆಯ ಪ್ರಥಮ ಪ್ರಯೋಗ
- ಕೈಮಣ್ಣು ಕುರಿತು ಮಾಹಿತಿ, ಗೀರು ಶಿಲ್ಪ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ
ಸುಳ್ಯ: ಪರಂಪರೆಯ ಕಾವಿ ಚಿತ್ತಾರ, ಗೀರು ಶಿಲ್ಪ ಪ್ರದರ್ಶನ ಮತ್ತು ಕಾವಿ ಕುಟೀರ ಉದ್ಘಾಟನಾ ಸಮಾರಂಭ ಸುಳ್ಯ ಮೊಗರ್ಪಣೆ ಬಳಿ ಇರುವ ಹಿರಿಯ ಲೇಖಕಿ ಜಯಮ್ಮ ಚೆಟ್ಟಿಮಾಡ ಅವರ ಕಾವ್ಯ ಕಾವೇರಿ ಮನೆಯಲ್ಲಿ ನಡೆಯಿತು.
ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ, ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ, ಸುಳ್ಯದ ಕಾವ್ಯ ಕಾವೇರಿ ಇದರ ವತಿಯಿಂದ ನಡೆದ ಕಾರ್ಯಕ್ರಮವನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸಿದರು. ಗೀರು ಎಲ್ಲಾ ಚಿತ್ರಗಳ ತಳಹದಿ. ಎಲ್ಲಾ ಜ್ಞಾನ ಹಾಗೂ ಕಲೆಗೂ ಗೀರು ಮೂಲ ಮತ್ತು ತಳಹದಿ ಎಂದ ಅವರು ಇಲ್ಲಿ ಪ್ರಥಮ ಪ್ರಯೋಗ ಆರಂಭವಾಗಿದ್ದು, ಹೊಸ ಬೆಳಕನ್ನು ನೀಡಲಿ ಎಂದು ಹಾರೈಸಿದರು.
ಅತಿಥಿಯಾಗಿದ್ದ ಸೋಣಂಗೇರಿ ಬಯಲು ಚಿತ್ರಾಯಲದ ನಿರ್ದೇಶಕ ಮೋಹನ ಸೋನ ಮಾತನಾಡಿ, ಪೂರ್ವಜರು ಆರಂಭದಲ್ಲಿ ತ್ರಿಕೋನ ಚಿತ್ರಗಳನ್ನು ಬರೆಯುತ್ತಿದ್ದರು. ಇದರಲ್ಲಿ ಗಂಡು ಹೆಣ್ಣು ಕಲ್ಪನೆ ಇದೆ. ಇದು ಸೃಷ್ಠಿಗೆ ಮೂಲ. ಇದನ್ನವರು ವಿಶಿಷ್ಟ ಯೋಚನೆಗಳಿಂದ ರೂಪಿಸಿಕೊಂಡಿದ್ದರು. ಪಂಚಭೂತಗಳ ಕಲ್ಪನೆಯಂತೆ ಐದು ಬಣ್ಣಗಳನ್ನು ಅವರು ಬಳಸುತ್ತಿದ್ದರು ಎಂದ ಅವರು ಗೀರು ಶಿಲ್ಪ ಉಳಿಸುವ ನಿಟ್ಟಿನಲ್ಲಿ ಹಾಕಿಕೊಂಡ ಯೋಜನೆ ಅದ್ಭುತವಾದದ್ದು. ಇಂಬುಕೊಟ್ಟು ಮುನ್ನಡೆಸಿದಾಗ ಯಶಸ್ವಿಯಾಗುವುದು ಎಂದರು.
ಕಾವಿ ಕಲೆಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಪ್ರಾಚ್ಯವಸ್ತು ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಆಗ್ರಹಿಸಿದರು. ಗೀರು ಕಲೆಗೆ ಬುಡಕಟ್ಟು ಸಮುದಾಯದವರಿಂದ ಆರಂಭವಾಗಿರುವುದಕ್ಕೆ ಐತಿಹಾಸಿಕ ಸಾಕ್ಷಗಳಿವೆ. ಕೊಲ್ಲೂರು ಕಾಡಿನ ಮಧ್ಯೆ ಇರುವ ಬುದ್ದನಜಡ್ಡು ಕೊಳಹನಕಲ್ಲು ಸಮೀಪದ ಗಾವಳಿ ಬಂಡೆಯಾಸರೆ ಮಂಡಲ 2500 ವರ್ಷಗಳ ಪ್ರಾಚೀನತೆ ಹೊಂದಿದೆ. ಇದನ್ನು ಉಳಿಸಲು ಪ್ರವಾಸೋದ್ಯಮ ಇಲಾಖೆಯಿಂದ ಪ್ರಾಚ್ಯ ವಸ್ತು ಇಲಾಖೆಗೆ ವರ್ಗಾಯಿಸಬೇಕು. ಸರ್ಕಾರಿ ಕಟ್ಟಡಗಳಲ್ಲಿ ಗೀರು ಃಆಗೂ ಕಾವಿ ಕಲೆಯನ್ನು ಬಳಕೆ ಮಾಡುವ ಮೂಲಕ ಕಲಾವಿದರನ್ನು ಪ್ರೋತ್ಸಾಸುವ ಕೆಲಸ ಆಗಬೇಕಿದೆ ಎಂದವರು ಆಗ್ರಹಿಸಿದರು. ಕಾವಿ ಕಲೆ, ಗೀರು ಕಲೆಯ ಕುರಿತು ಜಾನಪದ ವಿಶ್ವ ವಿದ್ಯಾನಿಲಯಗಳ ಮೂಲಕ ಡಿಪ್ಲೊಮೋ ಅಥವ ಸರ್ಟಿಫಿಕೇಟ್ ಕೋರ್ಸ್‌ನ್ನು ಇಲ್ಲಿ ಆರಂಭಿಸುವ ಚಿಂತನೆ ಇದೆ ಎಂದವರು ಪ್ರಕಟಿಸಿದರು. ಮಂಗಳೂರಿನ ಕಾವಿ ಚಿತ್ರ ಕಲಾವಿದೆ ವೀಣಾ ಶ್ರೀನಿವಾಸ, ಮದುವೆಗದ್ದೆ ಬೋಜಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೇಖಕಿ ಜಯಮ್ಮ ಚೆಟ್ಟಿಮಾಡ ಸ್ವಾಗತಿಸಿ, ಯಶ್ವಿತ್ ಕಾಳಮ್ಮನೆ ವಂದಿಸಿದರು. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಪ್ರಾತ್ಯಕ್ಷಿಕೆ:
ಮಂಗಳೂರಿನ ಕಾವಿ ಚಿತ್ರ ಕಲಾವಿದೆ ವೀಣಾ ಶ್ರೀನಿವಾಸ ಗೀರು ಶಿಲ್ಪ ರಚನೆ ಕುರಿತು ಅವರು ಪ್ರಾಯೋಗಿಕವಾಗಿ ಮಾಹಿತಿ ಕೈಮಣ್ಣು ಕುರಿತು ಮದುವೆಗದ್ದೆ ಭೋಜಪ್ಪ ಗೌಡ ಮಾಹಿತಿ ನೀಡಿದರು.
----------------------------