ಶಿಕ್ಷಣ ಸಾಲ ತೀರಿಸಲು ಕಿಡ್ನಿ ಮಾರ ಹೊರಟ ದಲಿತ ವಿದ್ಯಾರ್ಥಿ
ದಲಿತನ ಕಿಡ್ನಿಯನ್ನು ಕೊಳ್ಳುವವರೇ ಇರಲಿಲ್ಲ!
ಎಂಜಿನಿಯರಿಂಗ್ ವಿದ್ಯಾರ್ಥಿ ಇಂದು ಸ್ವೀಪರ್
ಆಗ್ರಾ, ಜ.23: ಮಾನವ ದೇಹದ ಪ್ರಮುಖ ಅಂಗವಾಗಿರುವ ಮೂತ್ರಪಿಂಡ ಕೆಟ್ಟುಹೋದರೆ ಅದಕ್ಕಿಂತ ಘೋರ ಇನ್ನೊಂದಿಲ್ಲ, ಬಡವರಿಗೆ ಸಾವೇ ಗತಿ. ದುಡ್ಡಿದ್ದವರು ಲಕ್ಷಾಂತರ ರೂ. ಕೊಡುತ್ತೇವೆಂದರೂ ಕಸಿ ಮಾಡಿಸಿಕೊಳ್ಳಲು ಬದಲಿ ಮೂತ್ರಪಿಂಡ ಸಿಗುವುದೇ ಕಷ್ಟ. ಇಂತಹುದರಲ್ಲಿ 19ರ ಹರೆಯದ ಯುವಕನೋರ್ವ ತನ್ನ ಶಿಕ್ಷಣ ಸಾಲ ತೀರಿಸಲು ತನ್ನ ಒಂದು ಮೂತ್ರಪಿಂಡವನ್ನೇ ಮಾರಲು ಮುಂದಾದರೂ ಕೊಳ್ಳುವವರೇ ಇರಲಿಲ್ಲ. ಕಾರಣ ಆತ ದಲಿತನಾಗಿದ್ದುದು! ಭಾರತವು ಜಾತ್ಯತೀತ ದೇಶ ಎಂದು ಯಾರು ಎಷ್ಟೇ ಡಂಗುರ ಹೊಡೆಯಲಿ..ಜಾತೀಯತೆಯ ವಿಷಬೀಜ ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿದೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೊಂದು ಸಿಗಲಿಕ್ಕಿಲ್ಲ.
ಹೈದರಾಬಾದ್ ವಿವಿಯ ದಲಿತ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆ ಹುಟ್ಟುಹಾಕಿರುವ ಜಾತೀಯತೆ ಕುರಿತಾದ ಕಾವೇರಿರುವ ಚರ್ಚೆಯ ನಡುವೆಯೇ ಇಂಜಿನಿ ಯರ್ ಆಗಬೇಕೆಂಬ ಕನಸನ್ನು ಕಂಗಳಲ್ಲಿ ತುಂಬಿ ಕೊಂಡಿರುವ ಐಐಟಿ-ಭುವನೇಶ್ವರದ ಯುವ ವಿದ್ಯಾರ್ಥಿಯೋರ್ವ ತುತ್ತಿನ ಚೀಲವನ್ನು ತುಂಬಿ ಸಿಕೊಳ್ಳಲು ಸಫಾಯಿ ಕಾರ್ಮಿಕನಾಗಿ ದುಡಿಯುತ್ತಿರುವ ಈ ಸತ್ಯಕಥೆ ‘ಮೇರಾ ಭಾರತ್ ಮಹಾನ್’ ಎಂದುಕೊಂಡಿರುವವರನ್ನು ಖಂಡಿತ ಇನ್ನಷ್ಟು ಮುಜುಗರಕ್ಕೆ ಸಿಲುಕಿಸುತ್ತದೆ.
ಇದು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಐಐಟಿ-ಭುವನೇಶ್ವರದಲ್ಲಿ ಎರಡನೆ ವರ್ಷದ ಮೈನಿಂಗ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಮಹೇಶ ವಾಲ್ಮೀಕಿ(19)ಯ ಕಥೆ. ತನ್ನ ಶಿಕ್ಷಣಕ್ಕಾಗಿ ಪಡೆದುಕೊಂಡಿದ್ದ 2.7 ಲ.ರೂ.ಸಾಲವನ್ನು ಮರುಪಾವತಿಸಲು ಕೆಲವು ಹತಾಶ ಕ್ರಮಗಳಿಗೂ ಈ ಭಾವಿ ಇಂಜಿನಿಯರ್ ಮುಂದಾಗಿದ್ದ. ಸುದೀರ್ಘ ಅನಾರೋಗ್ಯಕ್ಕೆ ಗುರಿಯಾಗಿದ್ದ ಮಹೇಶ ಚಿಕಿತ್ಸೆಗಾಗಿಯೇ ಇದ್ದಬದ್ದ ಹಣವನ್ನು ವ್ಯಯಿಸಿದ್ದು, ಶಿಕ್ಷಣಕ್ಕಾಗಿ ಪಡೆದಿದ್ದ ಸಾಲವನ್ನು ಮರಳಿಸಲು ಸಾಧ್ಯವಾಗದೇ ತುಂಬ ಒತ್ತಡದಲ್ಲಿ ಸಿಲುಕಿದ್ದ.
ಸಾಲ ಮರುಪಾವತಿಗೆ ಯಾವುದೇ ಪರ್ಯಾಯ ಮಾರ್ಗ ಕಾಣದಿದ್ದಾಗ ತನ್ನ ಒಂದು ಮೂತ್ರಪಿಂಡವನ್ನೇ ಮಾರಾಟ ಮಾಡಲು ನಿರ್ಧರಿಸಿದ್ದ ಮಹೇಶ ಅದಕ್ಕಾಗಿ ಗಿರಾಕಿಯನ್ನು ಹುಡುಕಲು ಆರಂಭಿಸಿದ್ದ. ಹುಲುಸಾಗಿರುವ ಮೂತ್ರಪಿಂಡಗಳ ಕಾಳ ಮಾರುಕಟ್ಟೆಯಲ್ಲಿಯೂ ಜನರು ಮೊದಲು ಆತನ ಜಾತಿ ಯಾವುದೆಂದು ಕೇಳುತ್ತಿದ್ದರು.
ವಾರಣಾಸಿ ಮತ್ತು ಆಳ್ವಾರ್‌ನಲ್ಲಿಯ ಸುಮಾರು ಐದು ಆಸ್ಪತ್ರೆಗಳನ್ನು ಮಹೇಶ ಎಡತಾಕಿದ್ದ. ಆದರೆ ಆತ ದಲಿತನಾಗಿರುವುದರಿಂದ ಯಾರೂ ಆತನ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಳ್ಳಲು ಒಪ್ಪುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಅಲ್ಲಿಗೆ ಮಹೇಶನ ಮುಂದಿದ್ದ ಕೊನೆಯ ದಾರಿಯೂ ಮುಚ್ಚಿಕೊಂಡಿತ್ತು. ಶಿಕ್ಷಕರು ಹೇಳುವಂತೆ ಅತ್ಯಂತ ಪ್ರತಿಭಾವಂತನಾಗಿದ್ದ ಮಹೇಶ ಓದಿಗೆ ತಿಲಾಂಜಲಿ ನೀಡಿ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ತನ್ನ ಹುಟ್ಟೂರಿನಲ್ಲಿ ತಿಂಗಳಿಗೆ ಜುಜುಬಿ 4,000 ರೂ.ಸಂಬಳಕ್ಕೆ ಸ್ವೀಪರ್ ಕೆಲಸಕ್ಕೆ ಸೇರಿಕೊಳ್ಳುವಂತಾಗಿತ್ತು. ಸೋತು ಹತಾಶನಾಗಿದ್ದ ಮಹೇಶ ಆತ್ಮಹತ್ಯೆಗೆ ಶರಣಾಗುವ ಬಗ್ಗೆಯೂ ತನ್ನ ಕೆಲವು ಸ್ನೇಹಿತರೆದುರು ಹೇಳಿಕೊಂಡಿದ್ದ.
ಮಹೇಶ ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಹೆದರಿದ್ದ ಕೆಲವು ಸ್ನೇಹಿತರು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಂದೀಪ್ ಪಾಂಡೆಯವರ ಗಮನಕ್ಕೆ ಈ ವಿಷಯವನ್ನು ತಂದಿದ್ದರು. ಮಹೇಶ ಓದುತ್ತಿದ್ದ ಐಐಟಿಯಲ್ಲಿಯೇ ಹಿಂದೆ ಗುತ್ತಿಗೆ ಆಧಾರದಲ್ಲಿ ಬೋಧಕನಾಗಿ ಕಾರ್ಯ ನಿರ್ವಹಿಸಿದ್ದ ಪಾಂಡೆ ತಕ್ಷಣವೇ ಸ್ಪಂದಿಸಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಂದ ದೇಣಿಗೆಗಳನ್ನು ಸಂಗ್ರಹಿಸಿ ಕೆಲ ದಿನಗಳ ಹಿಂದಷ್ಟೇ ಮಹೇಶನ ಶಿಕ್ಷಣ ಸಾಲವನ್ನು ತೀರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪಾರ್ಶ್ವವಾಯು ಪೀಡಿತ ತಂದೆ ಮತ್ತು ಕುಟುಂಬ ನಿರ್ವಹಣೆಗಾಗಿ ಹಲವಾರು ಮನೆಗಳಲ್ಲಿ ಮುಸುರೆ ತಿಕ್ಕುತ್ತಿರುವ ತಾಯಿಯ ಮಗನಾಗಿರುವ ಮಹೇಶ ತುತ್ತಿನ ಚೀಲವನ್ನು ತುಂಬಿಕೊಳ್ಳಲು ಇನ್ನೂ ಸ್ವೀಪರ್ ಆಗಿ ದುಡಿಯುತ್ತಿದ್ದಾನೆ.
ದಂಪತಿಯ ಮೂವರು ಮಕ್ಕಳಲ್ಲಿ ಅತ್ಯಂತ ಪ್ರತಿಭಾವಂತನಾಗಿರುವ ಮಹೇಶ ತನ್ನ ಸಾಧನೆಯ ಬಲದಿಂದಲೇ ಐಐಟಿಗೆ ಪ್ರವೇಶ ಪಡೆದಿದ್ದಾನೆ. ಪಾಂಡೆ ಆತನ ಪಾಲಿಗೆ ಅಕ್ಷರಶಃ ದೇವದೂತನಾಗಿದ್ದಾರೆ.
ನಮ್ಮ ದೇಶದ ವೃತ್ತಿಪರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರೋಹಿತ್ ವೇಮುಲಾನಂತಹ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಕೆಲವರು ತಮ್ಮ ಜೀವನಕ್ಕೇ ಅಂತ್ಯ ಹಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಕೆಲವು ಅದೃಷ್ಟಶಾಲಿಗಳಿಗೆ ಸಂದೀಪ್ ಸರ್‌ರಂತಹ ಜನರು ಸಿಗುತ್ತಾರೆ ಎನ್ನುತ್ತಾನೆ ಮಹೇಶ ವಾಲ್ಮೀಕಿ.