ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ
ಮೂಡುಬಿದಿರೆ, ಜ.23: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 14ನೆ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಶನಿವಾರ ಆರಂಭಗೊಂಡಿತು.
ಆಲಂಗಾರು ಚರ್ಚಿನ ಧರ್ಮಗುರು ರೆ.ಫಾ.ಬೇಸಿಲ್ ವಾಸ್, ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ.ಈಶ್ವರ ಭಟ್ ಮತ್ತು ಪುತ್ತಿಗೆಯ ಇ.ಎಂ.ಶಾಫಿ ಸಾಬ್ ಚಾಲನೆ ನೀಡಿದರು. ಕಂಬಳ ಸಮಿತಿಯ ಅಧ್ಯಕ್ಷ, ಯುವಜನ ಸೇವೆ ಸಚಿವ ಕೆ. ಅಭಯಚಂದ್ರ ಜೈನ್ ಸಾರಥ್ಯದಲ್ಲಿ ನಡೆಯುತ್ತಿರುವ ಕಂಬಳೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೌಟರ ಅರಮನೆಯ ಕುಲದೀಪ್ ಎಂ. ವಹಿಸಿದ್ದರು. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸಮಿತಿಯ ಕೋಶಾಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಪ್ರ.ಕಾ.ಗುಣಪಾಲ ಕಡಂಬ, ಉಪಾಧ್ಯಕ್ಷ ಉದ್ಯಮಿ ಪ್ರೇಮನಾಥ ಮಾರ್ಲ ಸುರೇಶ್ ಪ್ರಭು, ಏರಿಮಾರು ಚಂದ್ರಹಾಸ ಸನಿಲ್, ಮಾಧು ಭಂಡಾರಿ, ನವೀನ್‌ಚಂದ್ರ ಅಂಬೂರಿ, ಪ್ರಭಾಕರ ಹೆಗ್ಡೆ, ವಾಸು ಪೂಜಾರಿ, ಮಾಧು ಭಂಡಾರಿ, ನಮಿರಾಜ್ ಬನ್ನಡ್ಕ, ಪುರಸಭಾ ಸದಸ್ಯ ನಾಗರಾಜ ಪೂಜಾರಿ, ಅಬ್ದುಲ್ ಬಶೀರ್, ರೋಟರಿ ಅಧ್ಯಕ್ಷ, ಪುರಸಭಾ ಸದಸ್ಯ ಪಿ.ಕೆ.ಥೋಮಸ್, ಜೇಸಿಐ ಅಧ್ಯಕ್ಷೆ ರಶ್ಮಿತಾ ಯುವರಾಜ ಜೈನ್, ಲಯನ್ಸ್ ಅಧ್ಯಕ್ಷ ಆಂಡ್ರೂ ಡಿಸೋಜ, ರೋಟರ್ಯಾಕ್ಟ್ ಅಧ್ಯಕ್ಷ ಮುಹಮ್ಮದ್ ಆರಿಸ್, ಅಬ್ದುಲ್ಲತೀಫ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಕಂಬಳದ ಕೋಣಗಳಿಗೆ ಹಿಂಸೆ: ಎಚ್ಚರಿಕೆ
ಕಂಬಳದ ಕೋಣಗಳನ್ನು ಕರೆಗೆ ಇಳಿಸುವ ಮೊದಲು ಕೋಣಗಳ ಮಾಲಕರಿಗೆ ಸಂಘಟಕರು ಕೋಣಗಳಿಗೆ ಹಿಂಸೆ ಮಾಡಬಾರದೆಂದು ಎಚ್ಚರಿಕೆಯನ್ನು ನೀಡಿದ್ದರು. ಆದರೆ ಕೋಣಗಳನ್ನು ಓಡಿಸುವವರು ಮಾತ್ರ ಕೋಣಗಳನ್ನು ಓಡಿಸುವಾಗ ಹೊಡೆಯುತ್ತಲೇ ಬಂದಿದ್ದರು.
ಇದನ್ನು ಕಂಡ ಕಂದಾಯ ಅಧಿಕಾರಿಗಳು ಸಂಘಟಕರಿಗೆ ಸೂಚನೆಯನ್ನು ನೀಡಿದ ನಂತರ ಓಟಗಾರರನ್ನು ಕರೆದು, ಕಂಬಳದ ಕೋಣಗಳನ್ನು ಮುಂದೆ ಓಡಿಸಲು ಬಿಡುವುದಿಲ್ಲವೆಂದು ಕೋಲನ್ನು ತೆಗೆದುಕೊಂಡು ಎಚ್ಚರಿಕೆಯನ್ನು ನೀಡಿದ ಘಟನೆಯೂ ನಡೆದಿದೆ.