ಎಂಆರ್‌ಪಿಎಲ್ ವಿಸ್ತರಣೆ ಪ್ರಸ್ತಾಪ; ಭೂಸ್ವಾಧೀನಕ್ಕೆ ಒಪ್ಪಿಗೆ ಇಲ್ಲ: ಕೃಷಿಭೂಮಿ ಸಂರಕ್ಷಣಾ ಸಮಿತಿ
ಮಂಗಳೂರು, ಜ.23: ಎಂಆರ್‌ಪಿಎಲ್ ಕಂಪೆನಿ ವಿಸ್ತರಣೆ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕಿನ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಮತ್ತು ದೇಲಂತಬೆಟ್ಟು ಗ್ರಾಮಗಳಲ್ಲಿ ಯಾವುದೇ ಭೂಸ್ವಾಧೀನಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿಲ್ಲ ಎಂದು ಕೃಷಿಭೂಮಿ ಸಂರಕ್ಷಣಾ ಸಮಿತಿ ಸ್ಪಷ್ಟಪಡಿಸಿದೆ.
ಭೂಸ್ವಾಧೀನ ಕಾರ್ಯ ಆರಂಭವಾಗಿದೆ ಎಂಬ ಮಾಹಿತಿ ದೊರಕಿದ್ದು, ಈ ಗ್ರಾಮಗಳ ಒಟ್ಟು 2,035 ಎಕರೆ ಭೂಮಿಯು ಕೆಐಎಡಿಬಿಯಿಂದ 2007ರಲ್ಲಿ ಭೂಸ್ವಾಧೀನಕ್ಕಾಗಿ ಅಧಿಸೂಚಿತ ವಾಗಿತ್ತು. ಬಳಿಕ ಭೂ ಮಾಲಕರು, ರೈತರ ವಿರೋಧದ ಫಲವಾಗಿ 2011ರ ಜುಲೈ 12ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಅಧಿಸೂಚನೆಯಲ್ಲಿ ಪ್ರಾಥಮಿಕ ಅಧಿಸೂಚನೆ ಯನ್ನು ರದ್ದುಪಡಿಸಲಾಗಿತ್ತು. ಈ ನಡುವೆ ಇದೀಗ ಗ್ರಾಮಗಳ ಭೂಮಿಯ ಭೂಸ್ವಾಧೀನತೆಗೆ ಸಿದ್ಧತೆ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಸರಕಾರದ ಕ್ರಮವನ್ನು ವಿರೋಧಿಸಿದ್ದಾರೆ. ಕರ್ನಾಟಕ ಸರಕಾರ ಪ್ರಸ್ತುತ ಅನುಸರಿಸುತ್ತಿರುವ ಮತ್ತು ಭೂ ಸ್ವಾಧೀನತಾ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ 2013ರ ಪುನರ್ವಸತಿ ಮತ್ತು ಪರಿಹಾರ ಕಾಯ್ದೆಯಡಿ ಸರಕಾರಿ ಅಥವಾ ಸಾರ್ವಜನಿಕ ಯೋಜನೆಗಳಿಗೆ ಸ್ವಾಧೀನಪಡಿಸಲು ಉದ್ದೇಶಿಸಿರುವ ಭೂ ಪ್ರದೇಶದಲ್ಲಿ ಶೇ.70ರಷ್ಟು ಭೂ ಮಾಲಕರ ಒಪ್ಪಿಗೆ ಪಡೆಯದೆ ಭೂಮಿ ಸ್ವಾಧೀನಪಡಿಸುವಂತಿಲ್ಲ. ಈ ಬಗ್ಗೆ ಈಗಾ ಗಲೇ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಹಾಗಾಗಿ ಈ ಗ್ರಾಮಗಳಲ್ಲಿ ಯಾವುದೇ ಭೂಸ್ವಾಧೀನ ಪ್ರಯತ್ನವನ್ನು ಕೈಬಿಡಬೇಕು ಎಂದು ಸಮಿತಿ ಆಗ್ರಹಿಸಿದೆ.