ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕ್ರೀಡಾಕೂಟ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಮಂಗಳೂರು ಇವರ ಸಹಯೋಗದಲ್ಲಿ ನಗರದ ನೆಹರೂ ಮೈದಾನದಲ್ಲಿ ಪತ್ರಕರ್ತರ ಕ್ರೀಡಾಕೂಟವನ್ನು ಇಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿರಂತರ ವರದಿಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಈ ಕ್ರೀಡಾಕೂಟ ಒತ್ತಡದ ಬದುಕಿಗೆ ಮತ್ತಷ್ಟು ಸ್ಪೂರ್ತಿ ಕೊಡುತ್ತದೆ. ಪತ್ರಕರ್ತರಲ್ಲೂ ಸಾಕಷ್ಟು ಪ್ರತಿಭೆಗಳಿದ್ದಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಈ ಕ್ರೀಡಾಕೂಟದ ಮೂಲಕ ಆಗುತ್ತಿರುವುದು ಹರ್ಷದಾಯಕ ಎಂದರು.
ಸ್ಪೋರ್ಟ್ಸ್ ಪ್ರಮೋಟರ್ಸ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಮ್ಮದಿ ಬೆಳೆಸುವಲ್ಲಿ ಕ್ರೀಡಾಕೂಟದ ಪಾತ್ರ ಹಿರಿದಾದುದು. ಈ ಕ್ರೀಡಾಕೂಟವು ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರುತ್ತದೆ. ಹಿಂದಿನಿಂದಲೂ ಸ್ಪೋರ್ಟ್ಸ್ ಪ್ರಮೋಟರ್ಸ ಕ್ರೀಡೆಗಳಿಗೆ ಉತ್ತಮ ಉತ್ತೇಜನ ಕೊಡುತ್ತಾ ಬಂದಿದ್ದು, ಪತ್ರಕರ್ತರ ಸಂಘಟನೆ ಜೊತೆ ಉತ್ತಮ ಭಾಂದವ್ಯ ಹೊಂದಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಭಾಸ್ಕರ ತೊಕ್ಕೊಟ್ಟು ಮಾತನಾಡಿ, ಕ್ರೀಡಾಕ್ಷೇತ್ರಕ್ಕೆ ನಾನು ಪಾದಾರ್ಪಣೆ ಮಾಡಿದಾಗ ನನ್ನನ್ನು ಪ್ರೋತ್ಸಾಹಿಸಿ ಗುರುತಿಸುವಂತೆ ಮಾಡಿದ್ದು ಪತ್ರಕರ್ತರು. ಹಿಂದೆ ಬಡತನದ ಬೇಗೆಯಲ್ಲಿ ನಾನು ಬೆಂದಿದ್ದರೂ, ಇಂದು ಗೌರವದ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದೇನೆ. ಇದಕ್ಕೆ ಕಾರಣಕರ್ತರಾದ ಪತ್ರಕರ್ತರಿಗೆ ನಾನೆಂದೂ ಚಿರಋಣಿ ಎಂದರು.
ಪ್ರೆಸ್ ಕ್ಲಬ್ ಟ್ರಸ್ಟಿ ಆನಂದ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ , ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಮತ್ತಿತ್ತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತರಾದ ಮುಹಮ್ಮದ್ ಆರಿಫ್ ಸ್ವಾಗತಿಸಿ, ಪುಷ್ಪರಾಜ್ ನಿರೂಪಿಸಿದರು.