ಕರ್ನಾಟಕ ಝಕಾತ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನಿಂದ 1,960 ಮಂದಿಗೆ ವಿದ್ಯಾರ್ಥಿವೇತನ ವಿತರಣೆ
ಮಂಗಳೂರು, ಜ.24: ಕರ್ನಾಟಕ ಝಕಾತ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಲೊಯೊಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 1,960 ವಿದ್ಯಾರ್ಥಿಗಳಿಗೆ 89.96 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸುಮಾರು 3,000 ಮಂದಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಶೇ. 70 ಅಂಕಕ್ಕಿಂತ ಮೇಲ್ಪಟ್ಟ ಪಿಯುಸಿ ವಿದ್ಯಾರ್ಥಿಗಳಿಗೆ, ಶೇ.65 ಅಂಕ ಮೇಲ್ಪಟ್ಟ ಪದವಿ ವಿದ್ಯಾರ್ಥಿಗಳು ಹಾಗೂ ಶೇ.60 ಅಂಕಗಳಿಗೆ ಮೇಲ್ಪಟ್ಟ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಹೈದರಾಬಾದ್ ಝಕಾತ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಗಿಯಾಝುದ್ದೀನ್ ಬಾಬುಖಾನ್ ಮಾತನಾಡಿ, ಕರ್ನಾಟಕ ಝಕಾತ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಕೇಂದ್ರ ಸರಕಾರವೂ ಅಲ್ಪಸಂಖ್ಯಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಆದರೆ ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನದ ಕೊರತೆಯಿಂದ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಕರ್ನಾಟಕ ಝಕಾತ್ ಚಾರಿಟೆಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ ಪಡೆದು ಉದ್ಯೋಗ ಗಿಟ್ಟಿಸಿಕೊಂಡವರು ತಮ್ಮ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಬೆಂಬಲ ನೀಡಬೇಕೆಂದು ಇದೇ ಸಂದರ್ಭಲ್ಲಿ ಗಿಯಾಝುದ್ದೀನ್ ಬಾಬುಖಾನ್ ಕರೆ ನೀಡಿದರು.
ಹೈದರಾಬಾದ್ ಝಕಾತ್ ಟ್ರಸ್ಟ್ ಆರಂಭದಲ್ಲಿ ಸಮುದಾಯದ ಸದಸ್ಯರಿಂದ ಕೆಲವು ಲಕ್ಷ ರೂ. ಮಾತ್ರ ದೇಣಿಗೆ ಬರುತ್ತಿತ್ತು. ಆದರೆ ಪ್ರಸಕ್ತ ವರ್ಷಕ್ಕೆ 13 ಕೋ.ರೂ. ದೇಣಿಗೆ ಬಂದಿದ್ದು, ಈ ದೇಣಿಗೆಯಿಂದ ವಾರ್ಷಿಕ 40 ಸಾವಿರಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲು ಟ್ರಸ್ಟ್‌ನಿಂದ ಸಾಧ್ಯವಾಗುತ್ತಿದೆ ಎಂದವರು ಹೇಳಿದರು.
ಕರ್ನಾಟಕ ಝಕಾತ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಖಲೀಲ್ ಅಹ್ಮದ್ ಮಾತನಾಡಿ, ಈ ಟ್ರಸ್ಟ್‌ನಡಿ ಬರುವ ರಾಜ್ಯದ 13 ಜಿಲ್ಲೆಗಳಿಗೆ ಕಳೆದ ಆರು ವರ್ಷಗಳಿಂದ ಝಕಾತ್‌ನ್ನು ವಿತರಿಸುತ್ತಾ ಬಂದಿದ್ದು, ಝಕಾತ್‌ನ ಹಣವು ಶಿಕ್ಷಣ ಮತ್ತು ಸಶಕ್ತತೆಗೆ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂದರು.
ಹೈದರಾಬಾದ್ ಝಕಾತ್ ಚಾರಿಟೇಬಲ್ ಟ್ರಸ್ಟ್ ಮಹತ್ವದ ಸೇವಾ ಕಾರ್ಯಕ್ರಮವನ್ನು ಕೈಗೊಂಡಿರುವುದು ಮಾದರಿಯಾಗಿದೆ ಎಂದರಲ್ಲದೆ, ಆರ್ಥಿಕ ಸಂಕಷ್ಟದಲ್ಲಿರುವ ಸಮುದಾಯದ ಜನರಿಗೆ ಸಂಘಟಿತರಾಗಿ ಪರಸ್ಪರ ನೆರವು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಾಯ ನೀಡುವಂತಾಗಬೇಕೆಂದರು.
ವೇದಿಕೆಯಲ್ಲಿ ಕರ್ನಾಟಕ ಟ್ರಸ್ಟಿ ಶಾಹಿದ್ ಅಲಿಖಾನ್, ಟ್ರಸ್ಟ್ ಆಲಂ ಠಾಕೂರ್, ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಶಾಂತಿ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎ.ಎಚ್.ಮಹ್ಮೂದ್, ಉದ್ಯಮಿ ಉಮರ್ ಟಿ.ಕೆ., ಸರಕಾರಿ ಶಾಲಾ ಶಿಕ್ಷಕ ಅಬ್ದುರ್ರಝಾಕ್ ಅನಂತಾಡಿ, ಬ್ಯಾರೀಸ್ ಎಂಜಿನಿಯರಿಂಗ್ ಕಾಲೇಜಿನ ಎಚ್‌ಒಡಿ ಶೇಖ್ ಮುಹಿಯುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.