ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಮೊದಲ ಬಾರಿಗೆ ತೇಜಸ್ ಭಾಗಿ

Update: 2016-01-24 16:49 GMT

 ಮನಾಮಾ,ಜ.24: ಭಾರತದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಇದೇ ಮೊದಲ ಬಾರಿಗೆ ಶನಿವಾರ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಯಿತು. ಬೆಹರೀನ್ ರಾಜಧಾನಿ ಮನಾಮಾದಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ಈ ಐತಿಹಾಸಿಕ ಘಳಿಗೆಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸಾಕ್ಷಿಯಾದರು.

 ತನ್ನ ಎರಡು ದಿನಗಳ ಭೇಟಿಯಲ್ಲಿ ರವಿವಾರ ಭಾರತ-ಅರಬ್ ಲೀಗ್ ಸಹಕಾರ ವೇದಿಕೆಯ ಮೊದಲ ಸಚಿವ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಸ್ವರಾಜ್ ಶನಿವಾರ ಬೆಹರೀನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಸಾಖಿರ್ ವಾಯು ನೆಲೆಯಲ್ಲಿ ನಡೆಯುತ್ತಿರುವ ಪ್ರದರ್ಶನದ ನೇಪಥ್ಯದಲ್ಲಿ ಬೆಹರೀನ್‌ನ ದೊರೆ ಹಾಮದ್ ಬಿನ್ ಈಸಾ ಅಲ್ ಖಲೀಫಾ ಅವರನ್ನು ಭೇಟಿಯಾದ ಸ್ವರಾಜ್ ಅವರೊಂದಿಗೆ ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ತಂಡದ ವೈಮಾನಿಕ ಕಸರತ್ತನ್ನೂ ವೀಕ್ಷಿಸಿದರು.

ಮೂರು ದಶಕಗಳ ಸುದೀರ್ಘ ಪರಿಶ್ರಮದ ಬಳಿಕ ರೂಪುಗೊಂಡಿರುವ ತೇಜಸ್ 2015,ಜ.17ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದೆ. ವಾಯುಪಡೆಯು 120 ತೇಜಸ್ ಲಘು ಯುದ್ಧವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News