‘ದ್ವಿಚಕ್ರ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಬೇಕಾಗಿದೆ’
ಕಾಪು, ಜ.24:ದೇಶದಲ್ಲಿ ಮಾರಣಾಂತಿಕ ಕಾಯಿಲೆಗಿಂತಲೂ ಹೆಚ್ಚಾಗಿ ಜನರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಕಾಪು ವೃತ್ತ ನಿರೀಕ್ಷಕ ಸುನೀಲ್ ವೈ. ನಾಯಕ್ ಹೇಳಿದರು. ಕಾಪು ಪೊಲೀಸ್ ಠಾಣೆ, ಜೇಸಿಐ ಕಾಪು, ಜೇಸಿರೆಟ್ ವಿಭಾಗ ಮತ್ತು ಯುವ ಜೇಸಿ ವಿಭಾಗ ಹಾಗೂ ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ ರಸ್ತೆ ಸುರಕ್ಷತಾ ಜಾಗೃತಿ ಜಾಥಾ, ಹೆಲ್ಮೆಟ್ ಧಾರಣೆ ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗೂ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲೆಡೆಯಲ್ಲಿ ಶೇ. 23ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರು, ಶೇ. 22ರಷ್ಟು ಮಂದಿ ಪಾದಚಾರಿಗಳು, ಶೇ. 5ರಷ್ಟು ಸೈಕಲ್ ಸವಾರರು, ಶೇ. 31ರಷ್ಟು ಮಂದಿ ಕಾರು ಅಪಘಾತಕ್ಕೆ ಹಾಗೂ ಶೇ.19ರಷ್ಟು ಮಂದಿ ಇತರೇ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಹೀಗೆ ದುರ್ಮರಣಕ್ಕೆಡಾಗುವವರಲ್ಲಿ ಶೇ. 59ರಷ್ಟು ಮಂದಿ 15ರಿಂದ 44 ವರ್ಷ ಪ್ರಾಯದವರೇ ಆಗಿರುವುದು ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಯುವಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವುದು ಅತೀ ಆವಶ್ಯಕ ಎಂದರು. ಕಾಪು ಜೇಸಿಐ ಅಧ್ಯಕ್ಷ ಸೌಮ್ಯಾ ರಾಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ವಿ. ಕೆ. ಉದ್ಯಾವರ್, ಜೇಸಿಐನ ಪೂರ್ವ ವಲಯಾಧಿಕಾರಿ ಹರೀಶ್ ಕುಮಾರ್ ಹೆಜ್ಮ್ಮಾಡಿ ಮುಖ್ಯ ಅತಿಥಿಗಳಾಗಿದ್ದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್. ಕಾಪು ಠಾಣಾ ಎಎಸ್‌ಐ ಜಯಶೀಲ, ಕಾಪು ಜೇಸಿಐನ ಕಾರ್ಯದರ್ಶಿ ವಿನೋದ್ ಕಾಂಚನ್, ಯುವ ಜೇಸಿ ಅಧ್ಯಕ್ಷ ಧೀರಜ್ ಕುಮಾರ್, ಕಾಪು ರೋಟರಿ ಅಧ್ಯಕ್ಷ ಪ್ರವೀಣ್ ಗುರ್ಮೆ ಉಪಸ್ಥಿತರಿದ್ದರು.ಪತ್ರಕರ್ತ, ಜೇಸಿಐನ ವಲಯ ಉಪಾಧ್ಯಕ್ಷ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಸಂದೀಪ್ ಕುಮಾರ್ ವಂದಿಸಿದರು. ಇದೇ ಸಂದರ್ಭದಲ್ಲಿ ಕಾಪು ಶ್ರೀ ಲಕ್ಷ್ಮೆಜನಾರ್ದನ ದೇವಸ್ಥಾನದಿಂದ ಕಾಪು ಪೊಲೀಸ್ ಠಾಣೆಯವರೆಗೆ ಕಾಲ್ನಡಿಗೆ ಮತ್ತು ಬೈಕ್ ರ್ಯಾಲಿ ನಡೆಯಿತು. ರಸ್ತೆ ಸುರಕ್ಷಾ ಕಾರ್ಯಕ್ರಮ ಮತ್ತು ಹೆಲ್ಮೆಟ್ ಧಾರಣೆ ಬಗ್ಗೆ ಕರಪತ್ರ ಬಿಡುಗಡೆಗೊಳಿಸಲಾಯಿತು. ಜಾಥಾದಲ್ಲಿ ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಕಾಪು ಪ್ರಥಮ ದರ್ಜೆ ಕಾಲೇಜಿನ ರೇಂಜರ್ ಮತ್ತು ರೋವರ್ಸ್ ಸದಸ್ಯರು ಭಾಗವಹಿಸಿದ್ದರು.