ನೇರ ತೆರಿಗೆ ವ್ಯಾಜ್ಯಗಳ ತ್ವರಿತ ಇತ್ಯರ್ಥ ವ್ಯವಸ್ಥೆಗೆ ಪ್ರಣವ್ ಕರೆ
ಹೊಸದಿಲ್ಲಿ, ಜ.24: ಉದ್ಯಮಸ್ನೇಹಿ ವಾತಾವರಣ ಕುರಿತ ಜಾಗತಿಕ ರ್ಯಾಂಕಿಂಗ್‌ನಲ್ಲಿ ಭಾರತದ ಸ್ಥಾನಮಾನ ಸುಧಾರಣೆಯಾಗಬೇಕಿದೆಯೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ರವಿವಾರ ಆಗ್ರಹಿಸಿದ್ದಾರೆ. ಹೆಚ್ಚುತ್ತಿರುವ ತೆರಿಗೆ ವಿವಾದಗಳ ಇತ್ಯರ್ಥಕ್ಕಾಗಿ ವಿನೂತನವಾದ ತೆರಿಗೆ ವ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸುವ ಅಗತ್ಯವಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.
ಆದಾಯತೆರಿಗೆ ಮೇಲ್ಮನವಿ ಟ್ರಿಬ್ಯೂನಲ್‌ನ 75ನೆ ವರ್ಷಾಚರಣೆಯ ಅಂಗವಾಗಿ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ನೇರ ತೆರಿಗೆ ವ್ಯಾಜ್ಯ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆಯೆಂದು ಅಭಿಪ್ರಾಯಿಸಿದ್ದಾರೆ. ಭಾರತೀಯ ಆರ್ಥಿಕತೆಯ ಅಭಿವೃದ್ಧಿಯ ಜೊತೆಜೊತೆಗೆ ನೇರ ತೆರಿಗೆಗಳು ಹಾಗೂ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ಇದು ತೆರಿಗೆ ವ್ಯಾಜ್ಯ ಇತ್ಯರ್ಥ ವ್ಯವಸ್ಥೆಯ ಮೇಲೆ ಅಪಾರ ಒತ್ತಡವನ್ನುಂಟು ಮಾಡಿದೆಯೆಂದವರು ಹೇಳಿದ್ದಾರೆ.
ಹೂಡಿಕೆಗಳನ್ನು ಉತ್ತೇಜಿಸಲು ಹಾಗೂ ಉದ್ಯಮವನ್ನು ಆಕರ್ಷಿಸಲು, ತೆರಿಗೆ ವ್ಯಾಜ್ಯಗಳನ್ನು ಇತ್ಯರ್ಥ ವ್ಯವಸ್ಥೆಯು ಪೂರಕವಾಗಿದೆಯೆಂದವರು ಹೇಳಿದ್ದಾರೆ. ವಿಶ್ವಬ್ಯಾಂಕ್‌ನ ಗ್ರೂಪ್ 2016ರ ವರದಿ ಪ್ರಕಾರ, ಉದ್ಯಮಸ್ನೇಹಿ ವಾತಾವರಣವಿರುವ ದೇಶಗಳ ಪಟ್ಟಿಯಲ್ಲಿ ಭಾರತವು 130ನೆ ಸ್ಥಾನದಲ್ಲಿದೆ.
‘‘ತ್ವರಿತವಾಗಿ ನ್ಯಾಯದಾನ ವ್ಯವಸ್ಥೆ, ಸ್ಥಿರವಾದ ಆದೇಶಗಳು, ನ್ಯಾಯಪರ ನಿಲುವು ಹಾಗೂ ಉದ್ಯಮ ಕೇಂದ್ರಿತ ವ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ಭಾರತದ ಬೆಳವಣಿಗೆಗೆ ಕೊಡುಗೆಯನ್ನು ನೀಡಬಲ್ಲುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ವ್ಯಾಪಕವಾದ ಬದಲಾವಣೆಯನ್ನು ಕಂಡಿದೆ. 2015-16ರ ಸಾಲಿನಲ್ಲಿ, ನೇರ ತೆರಿಗೆಯ ಮೂಲಕ 7.98 ಲಕ್ಷ ಕೋಟಿ ರೂ. ಆದಾಯ ದೊರೆಯುವ ನಿರೀಕ್ಷೆಯಿದೆಯೆಂದು ರಾಷ್ಟ್ರಪತಿ ತಿಳಿಸಿದರು. ಭಾರತದ ಆರ್ಥಿಕತೆಯಲ್ಲಿ ನೇರ ತೆರಿಗೆಯು ಮಹತ್ವದ ಪಾತ್ರ ವಹಿಸುತ್ತಿದೆಯೆಂಬುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆಯೆಂದವರು ಹೇಳಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.