ಐಸಿಸ್ ನಂಟು: ಶಂಕಿತ ಉಗ್ರರಿಬ್ಬರಿಗೆ ಎನ್‌ಐಎ ಕಸ್ಟಡಿ
Update: 2016-01-24 23:46 IST
ಹೊಸದಿಲ್ಲಿ, ಜ.24: ಐಸಿಸ್ ಜೊತೆ ಸಂಪರ್ಕ ಹೊಂದಿದ ಆರೋಪದಲ್ಲಿ ಬಂಧಿತರಾಗಿರುವ, ಇಬ್ಬರು ಶಂಕಿತ ಉಗ್ರರನ್ನು ರವಿವಾರ,ನಿಯೋಜಿತ ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ)ದ ನ್ಯಾಯಾಲಯದಲ್ಲಿ ರವಿವಾರ ಹಾಜರುಪಡಿಸಲಾಗಿದ್ದು, ಅವರನ್ನು 13 ದಿನಗಳ ಅವಧಿಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.
ಹೈದರಾಬಾದ್ ನಿವಾಸಿಗಳಾದ ಅಬು ಅನಸ್ ಹಾಗೂ ನಫೀಸ್ ಖಾನ್ ಅವರನ್ನು ಪಾಟಿಯಾಲ ಹೌಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಇವರಿಬ್ಬರೂ 24 ವರ್ಷ ವಯಸ್ಸಿನವರಾಗಿದ್ದು, ಅವರನ್ನು ನ್ಯಾಯಾಲಯ ಎನ್‌ಐಎ ಕಸ್ಟಡಿಗೆ ಒಪ್ಪಿಸಿತೆಂದು ಅಧಿಕೃತ ಮೂಲಗಳು ತಿಳಿಸಿವೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ದಾಳಿಗಳನ್ನು ನಡೆಸಲು ಸಂಚು ಹೂಡಿದ್ದಾರೆಂಬ ಆರೋಪದಲ್ಲಿ, ಎನ್‌ಐಎ ಹಾಗೂ ಇತರ ತನಿಖಾ ಸಂಸ್ಥೆಗಳು ಒಟ್ಟು 14 ಮಂದಿಯನ್ನು ಶುಕ್ರವಾರ ಹಾಗೂ ಶನಿವಾರ ಬಂಧಿಸಿತ್ತು.