ಜಯಾನಂದ ಕೊಲೆ : ಇಬ್ಬರು ಆರೋಪಿಗಳಿಗೆ ಜಾಮೀನು
Update: 2016-01-25 16:56 IST
ಸುಳ್ಯ: ಕೂತ್ಕುಂಜ ಗ್ರಾಮದ ಕಕ್ಯಾನ ಕಲ್ಕದ ಜಯಾನಂದ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಐವರು ಆರೋಪಿಗಳ ಪೈಕಿ ಇಬ್ಬರನ್ನು ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆಗೆ ಆದೇಶಿಸಿದೆ.
ಕಳೆದ ವರ್ಷ ಜು.14ರಂದು ನಾಪತ್ತೆಯಾಗಿದ್ದ ಜಯಾನಂದ ಅವರ ಶವ ಜು.29ರಂದು ಪೆರುವಾಜೆ ಗ್ರಾಮದ ಒಡ್ಯ ಕಾಡಿನಲ್ಲಿ ಪತ್ತೆಯಾಗಿತ್ತು. ಕಾಣಿಯೂರು ಮೂಲದ ಜಯಾನಂದರವರ ಪತ್ನಿ ಲಲಿತಾ ಮತ್ತು ಧನಂಜಯ ಪಂಜ ಎಂಬಾತನ ನಡುವಿನ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜಯಾನಂದ ಅವರನ್ನು ಅಪಹರಿಸಿ ಕೊಲೆಗೈದಿರುವುದನ್ನು ಪತ್ತೆ ಮಾಡಿದ ಪೊಲೀಸರು ಲಲಿತಾ, ಧನಂಜಯ, ಚಂದ್ರಕಾಂತ್ ಕರುಂಬು ನೆಕ್ಕಿಲ, ಕಾಣಿಯೂರು ಕಾಯಿಮಣದ ದಿನೇಶ್ ಮಜಲಡ್ಕ ಹಾಗೂ ಕಾಪೆಜಾಲು ಕೆಳಗಿನಕೇರಿ ಚಿಂತನ್ ಎಂಬವರನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಚಂದ್ರಕಾಂತ್ ಮತ್ತು ಚಿಂತನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.