ಪಾಕಿಸ್ತಾನ-ನ್ಯೂಝಿಲೆಂಡ್ ಸರಣಿ: ಅನ್ವರ್ ಅಲಿ ಬೌಲಿಂಗ್‌ನಲ್ಲಿ ಮೆಕ್ಲೆನಘನ್ ಕಣ್ಣಿಗೆ ಗಾಯ
ವೆಲ್ಲಿಂಗ್ಟನ್, ಜ.25: ಪಾಕಿಸ್ತಾನ ವಿರುದ್ಧ ಸೋಮವಾರ ಇಲ್ಲಿ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ನ್ಯೂಝಿಲೆಂಡ್‌ನ ವೇಗದ ಬೌಲರ್ ಮಿಚೆಲ್ ಮೆಕ್ಲೆನಘನ್ ಕಣ್ಣಿಗೆ ಚೆಂಡೊಂದು ಅಪ್ಪಳಿಸಿದ ಅಹಿತಕರ ಘಟನೆ ನಡೆದಿದೆ. ಪಾಕ್‌ನ ವೇಗದ ಬೌಲರ್ ಅನ್ವರ್ ಅಲಿ ಎಸೆದ ಚೆಂಡು ಮೆಕ್ಲೆನಘನ್ ಧರಿಸಿದ್ದ ಹೆಲ್ಮೆಟ್ ಗ್ರಿಲ್‌ಗೆ ಅಪ್ಪಳಿಸಿತ್ತು. ಚೆಂಡಿನ ರಭಸದಿಂದ ಮೆಕ್ಲೆನಘನ್ ಎಡ ಕಣ್ಣಿಗೆ ಗಾಯವಾಗಿತ್ತು. ಕಣ್ಣಲ್ಲಿ ರಕ್ತ ಸೋರಲಾರಂಭಿಸಿದ ಕಾರಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕ್ಕ ಸರ್ಜರಿಗೆ ಒಳಗಾಗಿದ್ದಾರೆ.
ಮೆಕ್ಲೆನಘನ್ ಕಣ್ಣಿನ ಅಂಚಿನಲ್ಲಿ ಸ್ವಲ್ಪ ಪ್ರಮಾಣದ ಬಿರುಕುಬಿಟ್ಟಿದ್ದು, ಅವರಿಗೆ ಚಿಕ್ಕದೊಂದು ಸರ್ಜರಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಳ ಕ್ರಮಾಂಕದ ಆಟಗಾರ ಮೆಕ್ಲೆನಘನ್ ಗಾಯದಿಂದ ಮೈದಾನವನ್ನು ತೊರೆಯುವ ಮೊದಲು 31 ರನ್ ಗಳಿಸಿದ್ದು, ಮ್ಯಾಟ್ ಹೆನ್ರಿ ಅವರೊಂದಿಗೆ 9ನೆ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿ ನ್ಯೂಝಿಲೆಂಡ್ 8 ವಿಕೆಟ್‌ನಷ್ಟಕ್ಕೆ 280 ರನ್ ಗಳಿಸಲು ನೆರವಾಗಿದ್ದರು.