ಉರುಳಿದ ಸಿಗ್ನಲ್ ಲೈಟ್ ಕಂಬ: ಅಪಾಯದಿಂದ ಪಾರಾದ ರೊನಾಲ್ಡಿನೊ
ಕೋಝಿಕೋಡ್, ಜ.25:ಬ್ರೆಝಿಲ್‌ನ ಫುಟ್ಬಾಲ್ ದಂತಕತೆ ರೊನಾಲ್ಡಿನೊ ಪವಾಡಸದೃಶವಾಗಿ ಅಪಾಯವೊಂದರಿಂದ ಪಾರಾದ ವಿಲಕ್ಷಣ ಘಟನೆ ಸೋಮವಾರ ಇಲ್ಲಿ ನಡೆದಿದೆ. ರೊನಾಲ್ಡಿನೊ ಪ್ರಯಾಣಿಸುತ್ತಿದ್ದ ಕಾರಿಗಿಂತ ಕೆಲವೇ ಅಡಿಗಳ ದೂರದಲ್ಲಿ ಪಾದಾಚಾರಿ ಸಿಗ್ನಲ್ ಲೈಟ್ ಕಂಬವೊಂದು ಉರುಳಿ ಬಿತ್ತು. ಪ್ರಸ್ತುತ ಕೇರಳ ಪ್ರವಾಸದಲ್ಲಿರುವ ರೊನಾಲ್ಡಿನೊ ನಡಾಕ್ಕಾವು ಸರಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರಿಪುರ್ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸರಕಾರ ನೀಡಿದ್ದ ವಾಹನದಲ್ಲಿ ಪ್ರಯಾಣಿಸುತ್ತಿದ್ದ ರೊನಾಲ್ಡಿನೊ ಶಾಲೆಯ ಗೇಟ್‌ನಿಂದ ಸ್ವಲ್ಪ ದೂರ ಕ್ರಮಿಸಿದ ತಕ್ಷಣ ಬೆಳಗ್ಗೆ 11:30ಕ್ಕೆ ಈ ಘಟನೆ ನಡೆದಿದೆ. ಈ ಘಟನೆಯಿಂದ ಪೊಲೀಸರು ಹಾಗೂ ಕಾರ್ಯಕ್ರಮ ಆಯೋಜಕರು ಒಂದು ಕ್ಷಣ ಆತಂಕಕ್ಕೀಡಾದರು.
ಪಾದಾಚಾರಿ ಸಿಗ್ನಲ್, ಶಾಲೆಯ ಗೇಟ್‌ನಿಂದ ಸ್ವಲ್ಪ ದೂರದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಬಳಕೆಯಾಗದೇ ತುಕ್ಕು ಹಿಡಿದಿದ್ದ ಸಿಗ್ನಲ್ ಕಂಬವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಆದರೆ, ಸಂಬಂಧಪಟ್ಟವರು ಇದಕ್ಕೆ ಸ್ಪಂದಿಸಿರಲಿಲ್ಲ. ಘಟನೆ ನಡೆದ 5 ನಿಮಿಷಗಳ ನಂತರ ರೊನಾಲ್ಡಿನೊ ಪ್ರಯಾಣ ಮುಂದುವರಿಸಿದರು. ಪೊಲೀಸರು ಉರುಳಿ ಬಿದ್ದ ಸಿಗ್ನಲ್ ಲೈಟ್ ಕಂಬವನ್ನು ಸ್ಥಳದಿಂದ ತೆರವುಗೊಳಿಸಿದರು.
ರವಿವಾರ ಕೇರಳಕ್ಕೆ ಆಗಮಿಸಿದ್ದ ರೊನಾಲ್ಡಿನೊ ಕೋಝಿಕೋಡ್ ಬೀಚ್‌ನಲ್ಲಿ ನಾಗ್‌ಜೀ ಇಂಟರ್‌ನ್ಯಾಶನಲ್ ಕ್ಲಬ್ ಫುಟ್ಬಾಲ್ ಟೂರ್ನಮೆಂಟ್‌ನ್ನು ಉದ್ಘಾಟಿಸಿದ್ದರು.