ಮಧ್ಯ ಪ್ರದೇಶ: ಇಂಜೆಕ್ಷನ್ ಕೊಟ್ಟು ಕಣ್ಣನ್ನೇ ತೆಗೆದರು

Update: 2016-01-25 13:58 GMT

ಸಾತ್ನಾ: ಮಧ್ಯಪ್ರದೇಶದ ಜನರು ಈಗಲೂ ಬಡ್‌ವಾನಿ ಶೋಪುರದಲ್ಲಿ ಕಣ್ಣು ಕಳೆದು ಕೊಂಡ ದುರಂತವನ್ನು ಇನ್ನೂ ಮರೆತಿಲ್ಲ. ಇದೀಗ ಸಾತ್ನ ಜಿಲ್ಲೆಯಲ್ಲಿ ರೆಟಿನಕ್ಕೆ ಇಂಜೆಕ್ಷನ್ ಕೊಡಿಸಿದ ನಂತರ ಕಣ್ಣು ಕಳಕೊಂಡಿದ್ದೇವೆಂದು 32ಮಂದಿ ರೋಗಿಗಳು ದೂರಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮುಖ್ಯ ಆರೋಗ್ಯ ಮತ್ತು ಚಿಕಿತ್ಸಾ ಅಧಿಕಾರಿಗೆ ತನಿಖೆಗೆ ಆದೇಶಿಸಿದ್ದಾರೆ. ಮೂವರು ಐ ಸ್ಪೆಶಲಿಸ್ಟ್ ವೈದ್ಯರ ತಂಡ ದೂರುದಾರ ರೋಗಿಗಳ ಕಣ್ಣು ಪರೀಕ್ಷೆ ನಡೆಸಲಿದ್ದಾರೆ.

  ಸಾತ್ನ ಜಿಲ್ಲೆಯ ಚಿತ್ರಕೂಟದಲ್ಲಿ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ ಡಿಸೆಂಬರ್ 29ಕ್ಕೆ 32 ರೋಗಿಗಳ ಕಣ್ಣಿನ ತಪಾಸಣೆ ನಡೆಸಲಾಗಿತ್ತು. ಮರುದಿವಸ ವೈದ್ಯರು ಅವರ ಕಣ್ಣಿನರೆಟಿನಕ್ಕೆ ಇಂಜೆಕ್ಷನ್ ಚುಚ್ಚಿದ್ದರು. ಆಮೇಲೆ ಇವರೆಲ್ಲರ ದೃಷ್ಟಿ ಹೋಗಿದೆ ಎಂದು ಹೇಳಿದಾಗ ಆಸ್ಪತ್ರೆಯವರು ಮತ್ತೆ ಇಂಜೆಕ್ಷನ್ ಕೊಟ್ಟು ಸ್ವಲ್ಪ ಸುಮ್ಮನಿರಿ ಮತ್ತೆ ದೃಷ್ಟಿ ಬರಲಿದೆ ಎಂದು ಹೇಳಿ ಕಳುಹಿಸಿದ್ದರು. ಆದರೆ ಮೂರು ತಿಂಗಳಾದರು ಇವರ ದೃಷ್ಟಿ ಬಂದಿರಲಿಲ್ಲ. ಚಿತ್ರಕೂಟದ ನೇತ್ರ ಚಿಕಿತ್ಸಾಲಯದ ಡಾ. ಇಲೇಶ್ ಜೈನ್‌ರ ಪ್ರಕಾರ ಇಂಜೆಕ್ಷನ್ ಕೆಟ್ಟಿದ್ದುದರಿಂದ ಹೀಗಾಗಿದೆ. ಆಸ್ಪತ್ರೆಯ ನಿರ್ದೇಶಕ ಡಾ.ಬಿಕೆ ಜೈನ್ ಇಂಜೆಕ್ಷನ್‌ನ್ನು ನಿಷೇಧಿಸಿದ್ದೇವೆ ಎಂದು ತಿಳಿಸಿದ್ದಾರೆ. ರೋಗಿಗಳಿಗೆ ಶುಲ್ಕವಿಲ್ಲದೆ ಚಿಕಿತ್ಸೆ ಲಭ್ಯಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕಿಂತ ಮೊದಲು ನವೆಂಬರ್‌ನಲ್ಲಿ ಬಡ್‌ವಾನಿಯಲ್ಲಿ 65 ರೋಗಿಗಳು ಕಣ್ಣು ಕಳಕೊಂಡಿದ್ದರು. ಆನಂತರ ಶೋಪುರದಲ್ಲಿ ಐದು ಮಂದಿ ರೋಗಿಗಳು ಕಣ್ಣುಕಳಕೊಂಡಿದ್ದರು. ಈ ಎರಡು ಘಟನೆಗಳು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದವು.ಆದರೆ ಸಾತ್ನ ಜಿಲ್ಲೆಯಲ್ಲಿ ಟ್ರಸ್ಟ್‌ವೊಂದರ ಮೂಲಕ ನಡೆಸಲಾಗುತ್ತಿರುವ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News