ಇಂದು ಭಾರತ-ಆಸ್ಟ್ರೇಲಿಯ ಮೊದಲ ಟ್ವೆಂಟಿ-20 ಪಂದ್ಯ; ಅನುಭವಿ ರೈನಾ, ಯುವರಾಜ್ ಸೇರ್ಪಡೆ

Update: 2016-01-25 18:05 GMT

 ಅಡಿಲೇಡ್, ಜ.25: ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು 1-4 ಅಂತರದಲ್ಲಿ ಕಳೆದುಕೊಂಡಿರುವ ಟೀಮ್ ಇಂಡಿಯಾಕ್ಕೆ ಬುಧವಾರ ಹೊಸ ಸವಾಲು ಎದುರಾಗಲಿದೆ. ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಭಾರತ ಎದುರಿಸಲಿದೆ.
ಜನವರಿ 26 ಭಾರತದ ಪಾಲಿಗೆ ಗಣರಾಜ್ಯ ದಿನ. ಆಸ್ಟ್ರೇಲಿಯಕ್ಕೆ ‘ಆಸ್ಟ್ರೇಲಿಯ ಡೇ’ ಈ ಕಾರಣದಿಂದಾಗಿ ಉಭಯ ತಂಡಗಳಿಗೂ ಮಹತ್ವದ ದಿನವಾಗಿದೆ.
ಮುಂಬರುವ ಟ್ವೆಂಟಿ-20 ವಿಶ್ವಕಪ್‌ನ ತಯಾರಿಗೆ ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಆಸ್ಟ್ರೇಲಿಯ ತಂಡ ಕಳೆದ ವರ್ಷ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು ಕಡಿಮೆ. ಆದರೆ ಭಾರತ ಹೆಚ್ಚು ಪಂದ್ಯಗಳನ್ನಾಡಿದೆ.
 ಮಾರ್ಚ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಟ್ವೆಂಟಿ-20 ವಿಶ್ವಕಪ್ ಕಡೆಗೆ ಮತ್ತೆ ಗಮನ ಹರಿಸಬೇಕಾಗಿದೆ.
ಭಾರತ ಕಳೆದ ವರ್ಷ ಹೆಚ್ಚು ಟ್ವೆಂಟಿ-20 ಪಂದ್ಯಗಳನ್ನಾಡಿದ್ದರೂ, ಯಶಸ್ಸು ಕಡಿಮೆ. ಝಿಂಬಾಬ್ವೆ ವಿರುದ್ಧ 1-1 ಡ್ರಾ, ದಕ್ಷಿಣ ಆಫ್ರಿಕ ವಿರುದ್ಧ 0-2 ಸೋಲು ಅನುಭವಿಸಿತ್ತು.ಟ್ವೆಂಟಿ-20ವಿಶ್ವಕಪ್‌ನ ತಂಡದ ಆಯ್ಕೆಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
 ಟೀಮ್ ಇಂಡಿಯಾಕ್ಕೆ ಕೆಲವು ಅನುಭವಿ ಮತ್ತು ಹಿರಿಯ ಆಟಗಾರರು ಮರಳಿದ್ದಾರೆ. ಯುವರಾಜ್ ಸಿಂಗ್, ಆಶಿಶ್ ನೆಹ್ರಾ, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರಂತಹ ಹಿರಿಯ ಆಟಗಾರರು ತಂಡದಲ್ಲಿದ್ದಾರೆ. ಆದರೆ ಆಶೀಶ್‌ನೆಹ್ರಾ 2011ರಲ್ಲಿ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ ಬಳಿಕ ಟೀಮ್ ಇಂಡಿಯಾದಲ್ಲಿ ಆಡಿಲ್ಲ. ಯುವರಾಜ್ ಸಿಂಗ್ 2014ಎಪ್ರಿಲ್‌ನಲ್ಲಿ ಬಾಂಗ್ಲಾದಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್ ಬಳಿಕ ತಂಡದಿಂದ ದೂರವಾಗಿದ್ದರು.
ಇನ್ ದಿ ಸ್ಪಾಟ್‌ಲೈಟ್
  ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಶಾನ್ ಟೇಟ್ 2011ರಲ್ಲಿ ವಿಶ್ವಕಪ್ ಮುಗಿದ ಬೆನ್ನಲ್ಲೇ ನಿವೃತ್ತರಾಗಿದ್ದರು. ಇದೀಗ ಅವರು ನಿವೃತ್ತಿ ನಿರ್ಧಾರವನ್ನು ಬದಲಿಸಿ ಮತ್ತೆ ತಂಡ ಸೇರ್ಪಡೆಗೊಂಡಿದ್ಧಾರೆ.
   ಆಲ್‌ರೌಂಡರ್ ಯುವರಾಜ್ ಸಿಂಗ್ 2011ರಲ್ಲಿ ಭಾರತ ವಿಶ್ವಕಪ್ ಜಯಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು.ಆದರೆ ಅದೇ ಯುವರಾಜ್ ಕಳೆದ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ 21 ಎಸೆತಗಳಲ್ಲಿ 11ರನ್ ಗಳಿಸುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದರು. ಭಾರತ ಪ್ರಶಸ್ತಿ ಎತ್ತುವ ಅವಕಾಶ ಕೈ ಚೆಲ್ಲಿತ್ತು. ಯುವರಾಜ್‌ಗೆ ಅದೇ ಕೊನೆಯ ಟ್ವೆಂಟಿ-20 ವಿಶ್ವಕಪ್ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇತ್ತೀಚೆಗೆ ವಿಜಯ್ ಹಝಾರೆ ಟ್ರೋಫಿಯಲ್ಲಿ 69.20 ಸರಾಸರಿಯಂತೆ 346 ರನ್ ಗಳಿಸಿದ್ದರು.ಈ ಕಾರಣದಿಂದಾಗಿ ಅವರು ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡದ ಸಮಾಚಾರ: ಈ ವರ್ಷದ ಮೊದಲ ಟ್ವೆಂಟಿ-20 ಪಂದ್ಯಕ್ಕೆ ಆಸ್ಟ್ರೇಲಿಯ 17 ಮಂದಿ ಆಟಗಾರರನ್ನು ಆಯ್ಕೆ ಮಾಡಿದೆ. ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಎಲ್ಲ ಮೂರು ಪಂದ್ಯಗಳಿಗೆ ಲಭ್ಯರಾಗುವ ನಿರೀಕ್ಷೆ ಇಲ್ಲ. ಶನಿವಾರ ಅವರು ನ್ಯೂಝಿಲೆಂಡ್‌ಗೆ ಏಕದಿನ ತಯಾರಿಗೆ ತೆರಳಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದ ಕಾರಣದಿಂದಾಗಿ ತಂಡದ ಸೇವೆಗೆ ಲಭ್ಯರಿಲ್ಲ.
ಭಾರತ ತಂಡದಲ್ಲಿ ಕೆಲವು ಹೊಸ ಮುಖಗಳಿಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯ : ಆ್ಯರೊನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಕ್ರಿಸ್ ಲಿನ್/ಟ್ರಾವಿಸ್ ಹೆಡ್, ಶೇನ್ ವ್ಯಾಟ್ಸನ್, ಜೇಮ್ಸ್ ಫಾಕ್ನರ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಜಾನ್ ಹೇಸ್ಟಿಂಗ್ಸ್, ನಥನ್ ಲಿನ್, ಕ್ಯಾಮರೊನ್ ಬೊಯ್ಸಾ, ಶಾನ್ ಟೇಟ್.
ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬುಮ್ರಾ, ಅಶೀಷ್ ನೆಹ್ರಾ.
ಪಿಚ್ ಪರಿಸ್ಥಿತಿ, ವಾತಾವರಣ: ಅಡಿಲೇಡ್ ಓವಲ್‌ನಲ್ಲಿ ಬಿಬಿಎಲ್ ಪಂದ್ಯಗಳಲ್ಲಿ ದಾಖಲಾದ ಸರಾಸರಿ ರನ್ 167. ತಂಡದ ಫಲಿತಾಂಶ ಮೊದಲೇ ನಿರೀಕ್ಷೆ ಅಸಾಧ್ಯ. ಟಾಸ್ ಗೆಲುವು ಅಷ್ಟೇನೂ ಪರಿಣಾಮ ಬೀರುವುದಿಲ್ಲ.
ಮಳೆ ಬರುವ ನಿರೀಕ್ಷೆ ಇಲ್ಲ. ಗರಿಷ್ಠ ತಾಪಮಾನ 31 ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.
ಹೈಲೈಟ್ಸ್
 

* ಕ್ಲೀನ್ ಸ್ವೀಪ್ ಮಾಡಿದ ತಂಡಕ್ಕೆ ನಂ.1 ಸ್ಥಾನಕ್ಕೆ ತಲುಪಲು ಸಾಧ್ಯ. *ಉಭಯ ತಂಡದಲ್ಲಿರುವ ತಲಾ ನಾಲ್ಕು ಆಟಗಾರರು ಚೊಚ್ಚಲ ಟ್ವೆಂಟಿ-20 ಪಂದ್ಯ ಆಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. *ಭಾರತದ ರಿಶಿ ಧವನ್, ಜಸ್ಪ್ರೀತ್ ಬುಮ್ರಾ, ಗುರುಕೀರತ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ , ಆಸ್ಟ್ರೇಲಿಯದ ನಥಾನ್ ಲಿನ್, ಟ್ರಾವಿಸ್ ಹೆಡ್, ಆ್ಯಂಡ್ರೊ ಟೈ ಮತ್ತು ಸ್ಕಾಟ್ ಬೊಲೆಂಡ್ ಚೊಚ್ಚಲ ಟ್ವೆಂಟಿ-20 ಪಂದ್ಯ ಆಡುವ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News