×
Ad

ಉಡುಪಿ : ಕೊಲೆಯತ್ನ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಶಿಕ್ಷೆ

Update: 2016-01-25 23:29 IST

ಉಡುಪಿ, ಜ.25: ಮಲ್ಪೆಪೊಲೀಸ್ ಠಾಣಾ ವ್ಯಾಪ್ತಿಯ ಪಡುತೋನ್ಸೆ ಎಂಬಲ್ಲಿ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆಯತ್ನ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳನ್ನು ಪಡುತೋನ್ಸೆ ಹಾಗೂ ಕೋಡಿ ಬೇಂಗ್ರೆ ಗ್ರಾಮದ ಪ್ರಶಾಂತ್, ನಾಗರಾಜ ಕುಂದರ ಉದಯ ಕುಂದರ, ಶಶಿ ಕುಂದರ, ಪ್ರವೀಣ ಕುಂದರ, ರೋಶನ್ ಸುವರ್ಣ ಎಂದು ಗುರುತಿಸಲಾ ಗಿದ್ದು, ಇವರೆಲ್ಲ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾಗಿದ್ದಾರೆ.
 ಪಡುತೋನ್ಸೆ ಗ್ರಾಮದ ಬೇಂಗ್ರೆ ನಾಗ ಸನ್ನಿಧಿ ದೇವಸ್ಥಾನದ ಬಳಿ 2013ರ ಡಿ.3ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪುರಂದರ ಹಾಗೂ ವಾಸು ಎಂಬ ವರು ಕೆಲಸ ಮಾಡುತ್ತಿದ್ದಾಗ ಆರೋಪಿಗಳು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಕಾಲಿನಿಂದ ತುಳಿದು, ಮರದ ದೊಣ್ಣೆಯಿಂದ ಹೊಡೆದರು. ಕೊಲೆ ಮಾಡುವ ಉದ್ದೇಶದಿಂದ ಅಲ್ಲೇ ಇದ್ದ ಶಿಲೆ ಕಲ್ಲನ್ನು ಎತ್ತಿ ಹಾಕಿದಾಗ ಅವರಿಬ್ಬರು ತಪ್ಪಿಸಿಕೊಂಡು ಪರಾರಿಯಾದರು. ಈ ಹಲ್ಲೆಯಿಂದ ಪುರಂದರ ಸಾದಾ ಹಾಗೂ ವಾಸುವಿಗೆ ತೀವ್ರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಅಂದಿನ ಮಲ್ಪೆ ಠಾಣೆಯ ಉಪನಿರೀಕ್ಷಕ ಜಯಂತ ಆರೋಪಿಗಳ ವಿರುದ್ಧ ಬಾದಂಸಂ ಕಲಂ 143, 147, 148, 323, 324, 326, 504, 307 ಜೊತೆಗೆ 149 ಕಾಯ್ದೆ ಕಲಂಗಳಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರವಾಗಿ ಮಹತ್ವದ ಸಾಕ್ಷಿಗಳನ್ನು ವಿಚಾರಣೆಗೊಳ ಪಡಿಸಿದ್ದು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಜ.25ರಂದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
     ಪ್ರತಿಯೊಬ್ಬ ಆರೋಪಿಗಳಿಗೂ ಕಲಂ307ರ ಅಪರಾಧಕ್ಕೆ 3 ವರ್ಷ ಶಿಕ್ಷೆ, 506ರ ಅಪರಾಧಕ್ಕೆ 1 ವರ್ಷ, 324ರ ಅಪರಾಧಕ್ಕೆ 1 ವರ್ಷ, 504ರ ಅಪ ರಾಧಕ್ಕೆ 6 ತಿಂಗಳು ಹಾಗೂ ಕಲಂ143, 148, 323ರ ಪ್ರತಿ ಅಪರಾಧಕ್ಕೆ 6 ತಿಂಗಳ ಶಿಕ್ಷೆಯನ್ನು ವಿಧಿಸಲಾಗಿದೆ. ಅದೇ ರೀತಿ ಎಲ್ಲ ಆರೋಪಿಗಳಿಗೆ ತಲಾ 4500ರೂ. ದಂಡ ವಿಧಿಸಿದ್ದು, ಇದರಿಂದ ಸಂಗ್ರಹವಾದ ಮೊತ್ತದಲ್ಲಿ 20000 ರೂ. ಗಾಯಾಳು ವಾಸು ಮೆಂಡನ್ ಹಾಗೂ 7000ರೂ.ವನ್ನು ಗಾಯಾಳು ಪುರಂದರ ಕುಂದರ್‌ಗೆ ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶ ನೀಡಿದರು. ಪ್ರಾಸಿಕ್ಯೂಷನ್ ಪರವಾಗಿ ಉಡುಪಿಯ ಟಿ.ಎಸ್.ಜಿತೂರಿ ವಾದವನ್ನು ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News