ಚುಟುಕು ಸುದ್ದಿಗಳು
ನಾಳೆ ಹ್ಯಾಂಡ್ ಬಾಲ್ ಪಂದ್ಯಾವಳಿ
ಬಂಟ್ವಾಳ, ಜ.25: ತಾಲೂಕಿನ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಹ್ಯಾಂಡ್ ಬಾಲ್ ಪಂದ್ಯಾವಳಿಯು ಜ. 27ರಂದು ಬೆಳಗ್ಗೆ ನಡೆಯಲಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ತಸ್ನೀಮಾ ಕರಾಟೆಯಲ್ಲಿ ಪ್ರಥಮ
ಕಾರ್ಕಳ,ಜ.25:ಇಲ್ಲಿನ ಭುವನೇಂದ್ರ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯ ವೈಟ್ ಟು ಗ್ರೀನ್ ಬೆಲ್ಟ್ ವಿಭಾಗದ ಕುಮಿಟೆಯಲ್ಲಿ ಹೊಸ್ಮಾರಿನ ಗುರುಕೃಪಾ ಆಂಗ್ಲ ಮಾಧ್ಯಮ ಶಾಲೆಯ 4ನೆ ತರಗತಿ ವಿದ್ಯಾರ್ಥಿನಿ ತಸ್ನೀಮಾ ಪ್ರಥಮ ಸ್ಥಾನ ಪಡೆದಿದ್ದಾರೆ. ಈಕೆ ಕರಾಟೆ ಶಿಕ್ಷಕ ರಾಮಚಂದ್ರರ ಶಿಷ್ಯೆ ಹಾಗೂ ಸೈಯದ್ ಅಬೂಬಕರ್ ಹಾಗೂ ಮೈಮುನಾ ದಂಪತಿಯ ಪುತ್ರಿ.
ಉಡುಪಿ ಜಿಲ್ಲೆಗೆ ಪ್ರಥಮ
ಉಡುಪಿ,ಜ25:ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ಕಳೆದ ಅಕ್ಟೋಬರ್‌ನಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ (ಕೊಳಲು) ಪರೀಕ್ಷೆಯಲ್ಲಿ ಬಿ.ಎಂ.ಪವನ್‌ರಾಜ್ ಸಾಮಗ ಶೇ.91.25 ಅಂಕಗಳನ್ನು ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಇವರು ವಿದ್ವಾನ್ ರವಿಕುಮಾರ್ ಮೈಸೂರು ಇವರ ಶಿಷ್ಯ. ಉಡುಪಿಯ ಬಿ.ಮುರಳೀಧರ ಸಾಮಗ ಹಾಗೂ ವಿಧುಷಿ ವೀಣಾ ಸಾಮಗ ದಂಪತಿಯರ ಪುತ್ರ.
ಜ.29: ದುಬೈಯಲ್ಲಿ ಸಮಸ್ತ ನೇತಾರರ ಅನುಸ್ಮರಣೆ
ದುಬೈ, ಜ.25: ಕರ್ನಾಟಕ ಇಸ್ಲಾಮಿಕ್ ಸೆಂಟರ್ ಅಧೀನದಲ್ಲಿ ಜೀಲಾನಿ ಅನುಸ್ಮರಣೆ, ಸಮಸ್ತ ನೇತಾರರಾದ ಶಂಸುಲ್ ಉಲಮಾ, ಕಣ್ಣಿಯತ್ ಉಸ್ತಾದ್ ಮತ್ತು ಇತರ ಸಮಸ್ತ ನೇತಾರರ ಅನುಸ್ಮರಣಾ ಸಂಗಮ ಹಾಗೂ ಸಮಸ್ತ 90ನೆ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಕಾರ್ಯಕ್ರಮವು ಜ.29ರಂದು ಜುಮಾ ನಮಾಝ್‌ನ ಬಳಿಕ ರಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಕೆಐಸಿ ಕೇಂದ್ರ ಸಮಿತಿ ಅಧ್ಯಕ್ಷ ಹಾಜಿ ಮುಹಿಯುದ್ದೀನ್ ಕುಟ್ಟಿ ದಿಬ್ಬ ಸಭಾಧ್ಯಕ್ಷತೆ ವಹಿಸಲಿದ್ದು, ಡಾ.ಎ ಸಲೀಂ ಫೈಝಿ ಇರ್ಫಾನಿ ಅಲ್ ಅಝ್ಹರಿ ಜೀಲಾನಿ ಸಂದೇಶ ನೀಡಲಿದ್ದಾರೆ ಎಂದು ಕೆಐಸಿ ಕೇಂದ್ರ ಸಮಿತಿ ಪಧಾನ ಕಾರ್ಯದರ್ಶಿ ನೂರ್‌ಮುಹಮ್ಮದ್ ನೀರ್ಕಜೆ ತಿಳಿಸಿದ್ದಾರೆ.
ತುಂಬೆ ಕಾಲೇಜಿಗೆ ಶೇ.100 ಫಲಿತಾಂಶ
ಮಂಗಳೂರು, ಜ.25: ಎಸ್‌ಸಿಎನ್‌ಟಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಸಿದ ನ್ಯಾನೋ ಸಯನ್ಸ್ ಎಂಡ್ ಟೆಕ್ನಾಲೊಜಿ ಕೋರ್ಸ್ ಪರೀಕ್ಷೆಯಲ್ಲಿ ತುಂಬೆ ಪ.ಪೂ. ಕಾಲೇಜಿನಿಂದ ಹಾಜರಾದ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ 100 ಶೇ. ಫಲಿತಾಂಶ ದಾಖಲಿಸಿದ್ದಾರೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪಲ್ಲವಿ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿನಿ ಸ್ವಾತಿ 100 ಶೇ. ಅಂಕ ಗಳಿಸಿರುತ್ತಾರೆ. ಒಬ್ಬ ವಿದ್ಯಾರ್ಥಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು 90%ಕ್ಕಿಂತ ಅಧಿಕ ಅಂಕ ಪಡೆದು ಎ+ ಶ್ರೇಣಿಗೆ ಭಾಜನರಾಗಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಇಂದಿನಿಂದ ಆರ್‌ಜೆ ಮ್ಯಾರಥಾನ್
ಮಂಗಳೂರು, ಜ.25: 92.7 ಬಿಗ್ ಎ್.ಎಂ. ವತಿಯಿಂದ ಇಂಡಿಯಾ ಶೇರ್ಸ್ ಇಂಡಿಯಾ ಕೇರ್ಸ್ ಧ್ಯೇಯವಾಕ್ಯದಡಿ ಜ.26ರಿಂದ ಜ.30ರವರೆಗೆ ಸತತ 92 ಗಂಟೆಗಳ ಆರ್‌ಜೆ ಮ್ಯಾರಥಾನ್ ನಡೆಸಲಾಗುವುದು ಎಂದು ಆರ್‌ಜೆ ಎರೋಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇಂಟರ್‌ನೆಟ್ ಶೇರಿಂಗ್‌ನ ಮೂಲಕ ಆಗುವ ಉಪಯೋಗಗಳು ಹಾಗೂ ನಮ್ಮ ಜೀವನದಲ್ಲಿ ಶೇರಿಂಗ್‌ನಿಂದ ಆಗುವ ಪ್ರಯೋಜನಗಳ ಕುರಿತು ಆರ್‌ಜೆ ಗಳು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ರಾಜಕಾರಣಿಗಳು, ಸಿನೆಮಾ ನಟ-ನಟಿಯರು, ಸಾಧಕರು ಮತ್ತು ಇನ್ನಿತರ ಖ್ಯಾತವ್ಯಕ್ತಿಗಳು ಭಾಗವಹಿಸಲಿದ್ದಾರೆ. ಜ. 26ರಂದು ಬೆಳಗ್ಗೆ 7ಗಂಟೆಗೆ ಬಿಗ್ ಎ್ಎಂ ಸ್ಟುಡಿಯೋದಲ್ಲಿ ಮ್ಯಾರಥನ್‌ಗೆ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಚಿತ್ರನಟ ಅವಿನಾಶ್ ಶೆಟ್ಟಿ, ನಟಿ ಸೌಜನ್ಯಾ ಹೆಗ್ಡೆ ಚಾಲನೆ ನೀಡಲಿದ್ದಾರೆ. ಆರ್‌ಜೆ ರಕ್ಷಿತಾ ಅವರು 92 ಘಂಟೆಗಳ ಮ್ಯಾರಥಾನ್ ಅನ್ನು ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್‌ಜೆ ರೂಪೇಶ್, ಆರ್‌ಜೆ ರಕ್ಷಿತಾ, ಜೊಯೆಲ್ ರೆಬೆಲ್ಲೊ ಉಪಸ್ಥಿತರಿದ್ದರು.
ಇಂದು ಸೈಕಲ್ ರ್ಯಾಲಿ
ಮಂಗಳೂರು, ಜ. 25: ಇಂಡಿಯನ್ ಆಯಿಲ್ ಸಂಸ್ಥೆಯು ‘ಇಂಧನ ಉಳಿಸಿ, ಪರಿಸರ ರಕ್ಷಿಸಿ’ಧ್ಯೇಯ ವಾಕ್ಯದಡಿ ಜ.26ರಂದು ಬೆಳಗ್ಗೆ ಮಂಗಳೂರಿನಿಂದ ಮಣಿಪಾಲವರೆಗೆ 120 ಕಿ.ಮೀ.ಸೈಕಲ್ ರ್ಯಾಲಿ ಆಯೋಜಿಸಿದೆ ಎಂದು ಸಂಸ್ಥೆಯ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಕೆ.ನವೀನ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮಂಗಳೂರು ಸೈಕಲ್ ಕ್ಲಬ್ ಸಹಭಾಗಿತ್ವದಲ್ಲಿ ನಡೆಯುವ ಈ ರ್ಯಾಲಿಯಲ್ಲಿ ಸುಮಾರು 30 ಸೆಕ್ಲಿಸ್ಟ್‌ಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 7:30ಕ್ಕೆ ಕೊಟ್ಟಾರಚೌಕಿ ಸಮೀಪದ ಇಂಡಿಯನ್ ಆಯಿಲ್ ಕಚೇರಿ ಬಳಿಯಿಂದ ರ್ಯಾಲಿಗೆ ಚಾಲನೆ ದೊರೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟಕರಾದ ಪ್ರಸನ್ನ, ದಿವಾಕರ್, ಚಂದ್ರನ್ ಮತ್ತು ಅನಿಲ್ ಉಪಸ್ಥಿತರಿದ್ದರು.
ಜ.31: ಉಚಿತ ವೈದ್ಯಕೀಯ ತಪಸಣಾ ಶಿಬಿರ
ಉಡುಪಿ, ಜ.25: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ವತಿ ಯಿಂದ ಉಡುಪಿ ಮಿಶನ್ ಆಸ್ಪತ್ರೆ, ನಾಗರಿಕ ಆರೋಗ್ಯ ವೇದಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಹಾಗೂ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇವುಗಳ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಸಣಾ ಶಿಬಿರವನ್ನು ಜ.31ರಂದು ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 12:30ರವರೆಗೆ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಬಂಧಿತರು ಶೀಘ್ರ ಬಿಡುಗಡೆ: ಐಎಫ್‌ಎಫ್
ಜಿದ್ದಾ, ಜ.25: ಸೌದಿ ಅರೇಬಿಯಾದಲ್ಲಿ ಅಕ್ರಮ ಕಾಲ್ ರೂಟಿಂಗ್ (ಹುಂಡಿ ಕರೆ) ಪ್ರಕರಣದ ಆರೋಪದಲ್ಲಿ ಜಿದ್ದಾ ಜೈಲಿನಲ್ಲಿ ಬಂಧಿತರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರಲ್ಲಿ ಮೂವರು ಒಂದು ತಿಂಗಳೊಳಗಾಗಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ಅನಿವಾಸಿ ಭಾರತೀಯ ಸಂಘಟನೆ ಇಂಡಿಯಾ ಫ್ರೆಟರ್ನಿಟಿ ಫಾರಂ ಜಿದ್ದಾ ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಕರಣದ ವಿಚಾರಣೆಯ ನೇತತ್ವ ವಹಿಸಿರುವ ನ್ಯಾಯಾಧೀಶ ಸಾದ್ ಅಲ್ ಜರ್ನಿ, ಆರೋಪಿಗಳಾದ ರಿಯಾಝ್ ಬಜ್ಪೆ, ಫೈರೋಝ್ ಉಳ್ಳಾಲ, ನಾಸೀರ್ ಬಂದರ್‌ರ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ. ಮತ್ತೋರ್ವ ಆರೋಪಿ ಶರೀಫ್ ಕಣ್ಣೂರು ಕೂಡ ಬಿಡುಗಡೆಯಾಗಲಿದ್ದಾರೆ ಎಂದು ಐಎಫ್‌ಎಫ್ ತಿಳಿಸಿದೆ.
ಹುಂಡಿ ಕರೆಗಳನ್ನು ಮಾಡುತ್ತಿರುವ ಕುರಿತು ಸೌದಿ ಟೆಲಿಕಾಂ ಕಂಪೆನಿಯು ನೀಡಿದ ವಿಭಿನ್ನ ನಾಲ್ಕು ದೂರಿನ ಅನ್ವಯ ದಕ್ಷಿಣ ಕನ್ನಡದ ಎಂಟು ಮಂದಿ ಅನಿವಾಸಿ ಭಾರತೀಯ ಯುವಕರನ್ನು 2003ರ ಮಾರ್ಚ್‌ನಲ್ಲಿ ಬಂಧಿಸಿ 6.7 ದಶಲಕ್ಷ ಸೌದಿ ರಿಯಾಲ್ ದಂಡವನ್ನು ಹೇರಿತ್ತು. 2010ರಲ್ಲಿ ಐಎಫ್‌ಎಫ್ ಈ ಪ್ರಕರಣಕ್ಕೆ ಸಂಬಂಧಿಸಿ ಮುತುವರ್ಜಿ ವಹಿಸಿ, ಹಂಗಾಮಿ ಸಮಿತಿಯೊಂದನ್ನು ರಚಿಸಿತ್ತು.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶಿ ಪಯಣಿಗರ ಸಂಖ್ಯೆ ಹೆಚ್ಚಳ ಮಂಗಳೂರು,ಜ.25:ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಳೆದ ಬಾರಿಗಿಂತ ಈ ಬಾರಿ ಶೇ.22ರಷ್ಟು ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ. ಶೇ.40ರಷ್ಟು (ಅಂತಾರಾಷ್ಟ್ರೀಯ ಪ್ರಯಾಣಿಕರು ) ವಿದೇಶಕ್ಕೆ ಪ್ರಯಾಣಿಸಿದ ಮತ್ತು ಶೇ.15ರಷ್ಟು ದೇಶೀಯ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಇದರೊಂದಿಗೆ ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ 16 ಲಕ್ಷ ತಲುಪಬಹುದು ಎಂದು ಅಂದಾಜಿಸಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜಿ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಕಳೆದ ಎಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ 12,42,613 ಪ್ರಯಾಣಿಕರನ್ನು ನಿರ್ವಹಣೆ ಮಾಡಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರ್ವಹಣೆ ಮಾಡುವ 12ನೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದೆ. ದೇಶ ದಲ್ಲಿ ದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್,ಕೊಲ್ಕತ್ತಾ, ಕಲ್ಲಿಕೋಟೆ, ತ್ರಿರುವನಂತಪುರಂ, ಅಹ್ಮದಾಬಾದ್, ತಿರಿಚಿ ಬಳಿಕ ಮಂಗಳೂರು ವಿಮಾನ ನಿಲ್ದಾಣ ಹೆಚ್ಚು ಪ್ರಯಾಣಿಕರನ್ನು ನಿರ್ವಹಣೆ ಮಾಡುವ ವಿಮಾನ ನಿಲ್ದಾಣವಾಗಿ ಗುರುತಿಸಲ್ಪಟ್ಟಿದೆ. ಕಳೆದ ಡಿಸೆಂಬರ್ ತಿಂಗಳೊಂದರಲ್ಲೇ 1,62,000 ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣವನ್ನು ಪ್ರಯಾಣಕ್ಕೆ ಬಳಸಿಕೊಂಡಿರುವುದು ದಾಖಲೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರು: ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಮಂಗಳೂರು,ಜ.25: ದ.ಕ. ಜಿಲ್ಲಾಡಳಿತ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಕದ್ರಿ ಪಾರ್ಕ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಜನಾಕರ್ಷಣೆಗೆ ಪಾತ್ರವಾಗಿದೆ. ಜ.23ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ತೆರೆಬೀಳಲಿದೆ.
ಫಲಪುಷ್ಪ ಪ್ರದರ್ಶನ ಆರಂಭಗೊಂಡಂದಿನಿಂದ ಕದ್ರಿಪಾರ್ಕ್‌ಗೆ ಜನಸಾಗರವೆ ಹರಿದುಬರುತ್ತಿದ್ದು ಪ್ರದರ್ಶನವನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷವಾಗಿರುವ 22 ಸಾವಿರ ಹೂವುಗಳಿಂದ ನಿರ್ಮಾಣಗೊಂಡಿರುವ ಯಕ್ಷಗಾನ ಮಾದರಿ, 20 ಸಾವಿರ ಹೂವುಗಳಿಂದ ನಿರ್ಮಾಣಗೊಂಡಿರುವ ಗಿಟಾರ್, ತಬಲ, ವೀಣೆ, 2 ಸಾವಿರ ಆಸ್ಪರೇಗಸ್‌ಗಳಿಂದ ನಿರ್ಮಾಣಗೊಂಡ ಡಾಲ್ಪಿನ್, 5 ಸಾವಿರ ಹೂವುಗಳಿಂದ ನಿರ್ಮಾಣಗೊಂಡ ಐಸ್‌ಕ್ರೀಮ್ ಆಕರ್ಷಣೆಗೆ ಪಾತ್ರವಾಗಿದೆ. ಈ ವಿಶೇಷ ಕಲಾಕೃತಿಗಳನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಶೈಲೇಶ ಎಂಬವರು ತಯಾರಿಸುತ್ತಿರುವ ತರಕಾರಿ ಕೆತ್ತನೆ ಪ್ರದರ್ಶನ ಕಂಡು ಹೆಚ್ಚಿನವರು ಪುಳಕಿತರಾಗಿದ್ದಾರೆ. ಕಲ್ಲಂಗಡಿ, ಸೌತೆ ಕಾಯಿ, ದ್ರಾಕ್ಷಿ, ಅನಾನಸು, ಸೋರೆಕಾಯಿಗಳಿಂದ ನಿರ್ಮಾಣಗೊಂಡಿರುವ ಕೋಳಿ, ಗುಲಾಬಿ, ಕಲಶ, ದೀಪ, ತೆಂಗಿನಗರಿ, ಹೂವಿನಚಟ್ಟಿಗಳು ಗಮನಸೆಳೆಯುತ್ತಿವೆ. ಕೈತೋಟ ಹಾಗೂ ತಾರಸಿಮನೆ ಕೃಷಿಗಳನ್ನು ಜನರು ಕುತೂಲಹದಿಂದ ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಜನರು ಕದ್ರಿಪಾರ್ಕ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಮಾರುಹೋಗಿದ್ದು ಸಾಗರೋಪಾದಿಯಲ್ಲಿ ಪಾರ್ಕ್‌ನತ್ತ ಧಾವಿಸುತ್ತಿದ್ದಾರೆ.
ಗಿಡಗಳಿಗೆ ಬೇಡಿಕೆ: ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿ ಬೀಜ ಮತ್ತು ಗಿಡಗಳು, ಹೂವಿನ ಗಿಡಗಳು, ಆಂತೋರಿಯಮ್ ಹಾಗೂ ಬೋನ್ಸಾಯ್ ಮಾಡಿದ ಗಿಡಗಳನ್ನು ಜನರು ಹೆಚ್ಚಿನ ಆಸಕ್ತಿಯಿಂದ ಖರೀದಿಸುತ್ತಿರುವುದು ಕಂಡುಬಂದಿದೆ.
ಎಲ್ಲೆಲ್ಲೂ ಸೆಲ್ಪಿ: ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುತ್ತಿರುವ ಜನರು ಇಲ್ಲಿನ ಕಲಾ ಸೊಬಗಿಗೆ ಮಾರುಹೋಗಿದ್ದು ಮೊಬೈಲ್‌ಗಳ ಮೂಲಕ ಸೆಲ್ಪಿ ಫೋಟೋಗಳನ್ನು ತೆಗೆಯುವ ದೃಶ್ಯ ಗಮನ ಸೆಳೆಯಿತು.
ತರಕಾರಿ ಕೆತ್ತನೆ ಪ್ರದರ್ಶನ ಕಂಡು ಜನರು ತುಂಬಾ ಖುಷಿಯಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಈ ರೀತಿಯ ಪ್ರದರ್ಶನ ಮಾಡುತ್ತಿದ್ದು, ಇಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಈ ರೀತಿಯ ಆಕರ್ಷಕ ಕೆತ್ತನೆ ಕಲಿಸಿ ಕೊಡಿ ಎಂದು ಕೇಳುತ್ತಿದ್ದಾರೆ. ಜನರು ಕೆತ್ತನೆ ಪ್ರದರ್ಶನ ಕಂಡು ಖುಷಿಗೊಂಡಿರುವುದು ನನಗೂ ಸಂತಸ ತಂದಿದೆ. ಎನ್ನುತ್ತಾರೆ ತರಕಾರಿ ಕೆತ್ತನೆ ಕಲಾವಿದ ಶೈಲೇಶ್.
ತರಕಾರಿಯನ್ನು ತಿನ್ನಲು ಮಾತ್ರ ಉಪಯೋಗಿ ಸಲಾಗುತ್ತದೆ ಎಂಬ ನಂಬುಗೆ ಈ ಪ್ರದರ್ಶನ ಕಂಡು ಹುಸಿ ಯಾಗಿದೆ. ತರಕಾರಿಗಳ ಮೂಲಕವು ಅದ್ಭುತ ಕಲಾಕೃತಿಗಳನ್ನು ರಚಿಸಬಹುದು ಎಂಬುದು ತರಕಾರಿ ಕೆತ್ತನೆ ಪ್ರದರ್ಶನ ನೋಡಿ ತಿಳಿದುಬಂದಿದೆ ಎನ್ನುತ್ತಾರೆ ಪ್ರವೀಣ್ ಕುಂಪಲ.