ಅಂಗನವಾಡಿ ಕೇಂದ್ರದ ಎದುರು ಹೆತ್ತವರಿಂದ ಪ್ರತಿಭಟನೆ
ಮಣಿಪಾಲ, ಜ.25: ಇಲ್ಲಿನ ಆದರ್ಶ ನಗರ 2ರ ಅಂಗನವಾಡಿ ಕೇಂದ್ರದ ಸಹಾಯಕಿಯನ್ನು ಹಠಾತ್ತನೆ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಮಕ್ಕಳ ಹೆತ್ತವರು ಇಂದು ಅಂಗನವಾಡಿ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ಸುಮಾರು 20ರಿಂದ 24 ಮಂದಿ ಮಕ್ಕಳಿರುವ ಆದರ್ಶನಗರ 2ನೆ ಅಂಗನವಾಡಿ ಕೇಂದ್ರ ಸಹಾಯಕಿ ಮಾಲಿನಿ ಅವರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಾವುದೇ ಮುನ್ಸೂಚನೆ ದಿಢೀರ್ ಆಗಿ ಶಾಂತಿನಗರ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಅಂಗವಾಡಿ ಮಕ್ಕಳ ಪೋಷಕರಲ್ಲಿ ಗೊಂದಲ ಹುಟ್ಟಿಸಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದರು. ಸೋಮವಾರ ಆದರ್ಶನಗರ 2ನೆ ಅಂಗನವಾಡಿ ಕೇಂದ್ರ ಸಮನ್ವಯ ಸಮಿತಿ ಹಾಗೂ ಈಶ್ವರನಗರ ವಾರ್ಡಿನ ನಾಗರಿಕರು ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು. ಕಳೆದ ಶನಿವಾರ ಜ.23ರಂದು ಮಾಲಿನಿ ಅವರು ಅಂಗನವಾಡಿ ಕಾರ್ಯಕರ್ತೆಯ ಕೈಯಲ್ಲಿ ವರ್ಗಾವಣೆ ಆದೇಶದ ಪ್ರತಿ ನೀಡಿ ಶಾಂತಿನಗರ ಅಂಗನವಾಡಿಗೆ ತೆರಳಿದ್ದಾರೆ ಎಂದು ಠಾಕೂರ್ ವಿವರಿಸಿದರು.
ಆಕೆ ನೀಡಿದ ಆದೇಶದ ಪ್ರತಿಯಲ್ಲಿ ಜ.13ರಂದು ನಮೂದಿಸಲಾಗಿದೆ ಎಂದ ಠಾಕೂರ್, ಇನ್ನೊಬ್ಬ ಸಹಾಯಕಿಯ ನೇಮಕವಾಗುವವರೆಗೆ ಮಾಲಿನಿ ಅವರೇ ಇಲ್ಲಿ ತಾತ್ಕಾಲಿಕವಾಗಿ ಮುಂದುವರಿಯಬೇಕು ಎಂದವರು ಪ್ರತಿಭಟನಕಾರರ ಪರವಾಗಿ ಒತ್ತಾಯಿಸಿದರು. ಬಳಿಕ ಈ ಕುರಿತು ಮನವಿ ಪತ್ರವೊಂದನ್ನು ಜಿಲ್ಲಾಧಿಕಾರಿಯವರಿಗೆ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಉಪೇಂದ್ರ ವಾಗ್ಳೆ, ನಾಗೇಶ್ ಸುಂದರ್, ಪತ್ರಕರ್ತ ಗಣೇಶ್‌ಪ್ರಸಾದ ಪಾಂಡೇಲು, ಅಂಗನವಾಡಿ ಕಾರ್ಯಕರ್ತೆ ಲಲಿತಾ ಎನ್. ಮುಂತಾದವರು ಉಪಸ್ಥಿತರಿದ್ದರು.