‘ನೇತ್ರಾವತಿ ಉಳಿಸಿ’ ಹೋರಾಟಗಾರರಿಂದ ಪ್ರತಿಭಟನೆ: ಬಂಧನ
Update: 2016-01-26 13:38 IST
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್‌ರವರು ನೆಹರೂ ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಹೊರಗಡೆ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಕಾರ್ಯಕರ್ತರಾದ ದಿನೇಶ್ ಹೊಳ್ಳ, ಸುದತ್ತಜೈನ್, ಶಶಿಧರ್ ಶೆಟ್ಟಿ ಸೇರಿದಂತೆ ಹಲವರು ಎತ್ತಿಹೊಳೆ ಯೋಜನೆ ವಿರೋಧಿಸಿ ಘೋಷಣೆ ಕೂಗಲಾರಂಭಿಸಿದರು. ಅದಾಗಲೇ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಇದಾದ ಬಳಿಕ ನೆಹರೂ ಮೈದಾನದಲ್ಲಿ ಧ್ವಜಾರೋಹಣ ಹಾಗೂ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆದು ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆಯೇ ಹೋರಾಟ ಸಮಿತಿಯ ಮತ್ತೊಂದು ತಂಡ ಕೇಂದ್ರ ಹಾಗೂ ರಾಜ್ಯ ಸಚಿವರಿಗೆ ಧಿಕ್ಕಾರ ಕೂಗುತ್ತಾ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ತಡೆದು ಬಂಧಿಸಿದರು.