ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಲ್ಲ ಎನ್ನುವುದು ಸುಳ್ಳು:ಎಲ್.ಕೆ.ಅಡ್ವಾಣಿ
ಹೊಸದಿಲ್ಲಿ,ಜ..26: ಅಸಹಿಷ್ಣುತೆ ಕುರಿತು ಕಾವೇರುತ್ತಿರುವ ಚರ್ಚೆಯ ನಡುವೆಯೇ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರು,ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಲ್ಲ ಎನ್ನುವ ಮಾತೇ ಇಲ್ಲ ಎಂದು ಹೇಳಿದರಲ್ಲದೆ, ಹಾಗೆ ಹೇಳುವ ಜನರಾದರೂ ಯಾರು ಎಂದು ಅಚ್ಚರಿ ವ್ಯಕ್ತಪಡಿಸಿದರು.
ಮಂಗಳವಾರ ಗಣರಾಜ್ಯೋತ್ಸವದ ಪ್ರಯುಕ್ತ ತನ್ನ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಲ್ಲ ಎಂದು ಹೇಳುತ್ತಿರುವ ಜನರು ಯಾರೋ ತನಗೆ ಗೊತ್ತಿಲ್ಲ. ಈ ಸ್ವಾತಂತ್ರಕ್ಕೆಂದೂ ದೇಶದಲ್ಲಿ ಚ್ಯುತಿಯುಂಟಾಗಿಲ್ಲ ಎಂದು ಹೇಳಿದರು.
ಮೋದಿ ಸರಕಾರದ ಆಡಳಿತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹಲವಾರು ಸಾಹಿತಿಗಳು ಮತ್ತು ಕಲಾವಿದರು ಹೇಳುತ್ತಲೇ ಇದ್ದರೂ ಸರಕಾರ ಮತ್ತು ಬಿಜೆಪಿ ಇದೊಂದು ರಾಜಕೀಯ ಪ್ರೇರಿತ ಹೇಳಿಕೆ ಎಂದು ತಳ್ಳಿಹಾಕಿವೆ.
ಕಳೆದ ವಾರ ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ವೇಳೆ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು, ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ದೊಡ್ಡ ತಮಾಷೆಯಾಗಿಬಿಟ್ಟಿದೆ ಎಂದು ಹೇಳಿದ್ದರು.
ಪಕ್ಷದ ಅಭ್ಯರ್ಥಿಯಾಗಿ ಪುನರಾಯ್ಕೆಯಾಗಿರುವ ಅಮಿತ್ ಶಾ ಅವರು ರವಿವಾರ ತನ್ನನ್ನು ಭೇಟಿಯಾಗಿದ್ದರ ಕುರಿತು ಪ್ರತಿಕ್ರಿಯಿಸಲು ಅಡ್ವಾಣಿ ನಿರಾಕರಿಸಿದರು.
ಬ್ರಿಟಿಷ್‌ರ ಆಡಳಿತದಲ್ಲಿ ಅಭಿವ್ಯಕ್ತಿ ಸ್ಯಾತಂತ್ರವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದಾಗ ಜನರು ಅದರ ವಿರುದ್ಧ ಹೋರಾಡಿದ್ದರು ಎಂದ ಅವರು ತುರ್ತು ಸ್ಥಿತಿಯನ್ನು ಪ್ರಸ್ತಾಪಿಸಿ,‘ನಮ್ಮ ಸರಕಾರ’ ಹಾಗೆ ಮಾಡಲು ಯತ್ನಿಸಿದ್ದಾಗಲೂ ಜನರು ಅದರ ವಿರುದ್ಧ ಹೋರಾಡಿದ್ದರು ಎಂದರು.
ಪ್ರತಿಯೊಬ್ಬರಲ್ಲೂ ದೇಶಭಕ್ತಿಯನ್ನು ಮೂಡಿಸುವುದು ಇಂದಿನ ಏಕೈಕ ಕಳಕಳಿಯಾಗಿರಬೇಕು ಎಂದು ಅವರು ನುಡಿದರು.