ಸುಳ್ಯದಲ್ಲಿ ನಡೆಯಿತು ಜೆಡಿಎಸ್ ಸಭೆ - ಮೈತ್ರಿ ಮಾಡಿಕೊಳ್ಳದೆ ಸ್ಪರ್ಧಿಸಲು ಕಾರ್ಯಕರ್ತರ ಆಗ್ರಹ
ಸುಳ್ಯ: ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯು ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಜಿಲ್ಲಾ ವಕ್ತಾರ ರಾಮ್‌ಗಣೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ತಾಲೂಕು ಘಟಕದ ಅಧ್ಯಕ್ಷ ದಯಾಕರ ಆಳ್ವ, ಎ.ಪಿ.ಎಂ.ಸಿ. ಅಧ್ಯಕ್ಷ ಜಾಕೆ ಮಾಧವ ಗೌಡ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಠಿಕಾನ, ತಾಲೂಕು ಯುವ ಜನತಾದಳ ಅಧ್ಯಕ್ಷ ಪ್ರವೀಣ್ ಮುಂಡೋಡಿ ಮೊದಲಾದವರು ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಕಾರ್ಯಕರ್ತರು ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ಪರ್ಧೆ ಮಾಡಬೇಕು ಎಂದು ಸಲಹೆ ನೀಡಿದರು. ಮಹಮ್ಮದ್ ಇಕ್ಬಾಲ್ ಎಲಿಮಲೆ, ವಿನೂಪ್ ಮಲ್ಲಾರ, ಹನೀಫ್ ಮೊಟ್ಟೆಂಗಾರು, ರೋಹನ್ ಪೀಟರ್, ನಾರಾಯಣ ಅಗ್ರಹಾರ, ಡಾಮೋಹನ್‌ಕುಮಾರ್ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷ ಅಧಿಕಾರದಲ್ಲಿ ಇದ್ದರೂ ಇಲ್ಲದಿದ್ದರೂ ನಾವೆಲ್ಲಾ ಸುದೀರ್ಘ ಕಾಲದಿಂದ ಪಕ್ಷದಲ್ಲಿದ್ದೇವೆ. ಇಲ್ಲಿ ಜೆಡಿಎಸ್‌ಗೆ ಮತಗಳಿವೆ. ನಮ್ಮಲ್ಲಿ ಉತ್ಸಾಹವೂ ಇದೆ. ಹಣವಾಗಲಿ, ಅಧಿಕಾರವಾಗಲಿ ನಮಗೆ ಬೇಡ, ಆದರೆ ನಾಯಕರಿಂದ ನೈತಿಕ ಬೆಂಬಲ ಬೇಕು. ಪಕ್ಷ ನಿಂತ ನೀರಾಗದೆ ಚಟುವಟಿಕೆಯಿಂದ ಕೂಡಿರಬೇಕು. ಜನವಿರೋಧಿ ನೀತಿಗಳ ವಿರೋಧಿಸಿ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು. ಹಿಂದಿನ ತಾ.ಪಂ. ಚುನಾವಣೆಯ ವೇಳೆ ನನ್ನ ವಿರುದ್ಧವೇ ಮತ್ತೊಬ್ಬ ಅಭ್ಯರ್ಥಿಗೆ ಬಿಫಾರ್ಮ್ ನೀಡಿ ಬಳಿಕ ಅವರು ಕೂಡಾ ಕಣದಿಂದ ಹಿಂದೆ ಸರಿಯುವ ಹಾಗಿತ್ತು. ಇಂತಹ ಬೆಳವಣಿಗೆಗಳು ನಡೆಯಬಾರದು. ಹೀಗಾದರೆ ನಮ್ಮ ನಾಯಕರನ್ನೇ ನಮ್ಮ ಗ್ರಾಮಕ್ಕೆ ಬಾರದಂತೆ ತಡೆಯಬೇಕಾಗುತ್ತದೆ ಎಂದು ರೋಹನ್ ಪೀಟರ್ ಹೇಳಿದರು. ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿಯವರು, ಪಕ್ಷದಲ್ಲಿ ಹಲವು ನ್ಯೂನತೆಗಳಿರುವುದು ನಿಜ. ರಾಜ್ಯದ ನಾಯಕರಿಂದಲೂ ನಮಗೆ ತೊಂದರೆಯಾಗಿದೆ. ಚುನಾವಣೆಗಾಗುವಾಗ ಪಕ್ಷಕ್ಕೆ ಬರುವುದು ಅವರಿಗೆ ಟಿಕೆಟ್ ನೀಡುವುದು ನಂತರ ಅವರು ಪಕ್ಷ ಬಿಟ್ಟು ಹೋಗುವುದು ಇದೆಲ್ಲಾ ನಡೆದುದರಿಂದ ನಮಗೇ ತಿರುಗುಬಾಣವಾಗಿದೆ. ಮುಂದೆ ಈ ರೀತಿಯಾಗಬಾರದು. ಈ ಚುನಾವಣೆಯಲ್ಲಿ ಸಿಪಿಎಂನೊಂದಿಗೆ ಮೈತ್ರಿ ಮಾಡುವಂತೆ ರಾಜ್ಯದಿಂದ ಆದೇಶ ಬಂದಿದೆ. ಸುಳ್ಯ ತಾಲೂಕಿನಲ್ಲಿ ಎಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳು ನಿಂತರೂ ಬಿಫಾರ್ಮ್ ನೀಡುತ್ತೇವೆ ಎಂದರು.
ತಾಲೂಕು ಜನತಾದಳ ಅಧ್ಯಕ್ಷ ದಯಾಕರ ಆಳ್ವ ಮಾತನಾಡಿ, ಈ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಎಸ್.ಡಿ.ಪಿ.ಐ.ನೊಂದಿಗೆ ಮೈತ್ರಿ ಮಾಡಿಕೊಂಡ ಕಾರಣ ನನಗೆ ವೇದಿಕೆಯಲ್ಲಿ ತಲೆತಗ್ಗಿಸಿ ಕುಳಿತುಕೊಳ್ಳುವಂತಾಗಿತ್ತು ಎಂದರು. ಎ.ಪಿ.ಎಂ.ಸಿ. ಅಧ್ಯಕ್ಷ ಜಾಕೆ ಮಾಧವ ಗೌಡ ಮಾತನಾಡಿ, ಪಕ್ಷದಿಂದ ಯಾವುದೇ ಕಾರ್ಯಕ್ರಮಗಳಿಲ್ಲದೆ, ಚಟುವಟಿಕೆಯಿಲ್ಲದೆ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವಂತಹ ಯೋಜನೆಗಳಿಲ್ಲದ್ದರಿಂದ ಕಾರ್ಯಕರ್ತರಿಗೆ ಭ್ರಮನಿರಸನವಾಗಿರುವುದು ನಿಜ. ಆದರೆ ಈಗಲೂ ಜೆಡಿಎಸ್ ಬಗ್ಗೆ ಗೌರವದ ವಾತಾವರಣ ಇದೆ. ನಾವೆಲ್ಲಾ ಧೃತಿಗೆಡದೆ ಪಕ್ಷವನ್ನು ಮುನ್ನಡೆಸೋಣ ಎಂದರು.