ಸುಳ್ಯ : ಗಣರಾಜ್ಯೋತ್ಸವದ ಅಂಗವಾಗಿ ಹಸಿವು ನಿವಾರಣೆ ಸಪ್ತಾಹ
ಸುಳ್ಯ: ಗಣರಾಜ್ಯೋತ್ಸವದ ಅಂಗವಾಗಿ ಹಸಿವು ನಿವಾರಿಸುವಿಕೆ ಸಪ್ತಾಹ ಕಾರ್ಯಕ್ರಮ ಸುಳ್ಯದ ಲಯನ್ಸ್ ಕ್ಲಬ್ ವತಿಯಿಂದ ಮಂಗಳವಾರ ನಡೆಯಿತು.
ಸುಳ್ಯದ ಮಾಜಿ ಸೈನಿಕರ ಸಂಘ ಹಾಗೂ ಲಯನೆಸ್ ಕ್ಲಬ್‌ಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತು. ಲಯನ್ಸ್ ಸೇವಾ ಸದನದ ಬಳಿಯಿಂದ ಸರ್ಕಾರಿ ಆಸ್ಪತ್ರೆಯ ವರಗೆ ಜಾಥಾ ನಡೆಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಜಾಥಾಕ್ಕೆ ಚಾಲನೆ ನೀಡಿದರು. ಸುಳ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸರ್ಕಾರದ ವತಿಯಿಂದ ಊಟದ ವ್ಯವಸ್ಥೆ ಇದ್ದು, ರೋಗಿಗಳ ಸಹಾಯಕರಿಗೆ ಒಂದು ವಾರ ಕಾಲ ಉಚಿತ ಊಟ ನೀಡುವ ಯೋಜನೆ ಇದಾಗಿದ್ದು, ಫೆಬ್ರವರಿ 1ರ ವರೆಗೆ ಹಸಿವು ನಿವಾರಿಸುವಿಕೆ ಸಪ್ತಾಹ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ ಹೇಳಿದರು.
ಮೊದಲ ದಿನ ಮಾಜಿ ಸೈನಿಕರ ಸಂಘದಿಂದ ಉಳಿದ 6 ದಿನ ಲಯನ್ಸ್ ಹಾಗೂ ಲಯನೆಸ್ ಕ್ಲಬ್‌ಗಳ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಹೇಳಿದರು.
ಲಯನ್ಸ್ ವಲಯ ಅಧ್ಯಕ್ಷ ಜಾಕೆ ಮಾಧವ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೈದ್ಯಾಧಿಕಾರಿ ಡಾ.ಕರುಣಾಕರ, ಲಯನ್ಸ್ ಕಾರ್ಯದರ್ಶಿ ಎಂ.ಎಸ್.ಪ್ರಸಾದ್, ಸುಲೈಮಾನ್, ಪಿ.ಎಂ.ರಂಗನಾಥ್, ನಳಿನ್ ಕುಮಾರ್ ಕೋಡ್ತುಗುಳಿ, ಕರುಂಬಯ್ಯ, ಶಶಿಧರ ಪಡ್ಪು, ಲಯನೆಸ್ ಕ್ಲಬ್ ಅಧ್ಯಕ್ಷೆ ಪುಷ್ಪಾ ವಿಶ್ವನಾಥ್, ಕಾರ್ಯದರ್ಶಿ ಬಿ.ಜಿ.ರಾಧಾಮಣಿ, ನೇತ್ರಾವತಿ ಪಡ್ಡಂಬೈಲು ಮೊದಲಾದವರಿದ್ದರು.