ಲಾನ್ಸ್ ನಾಯಕ್ ಮೋಹನನಾಥ್ ಗೋಸ್ವಾಮಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ಪ್ರದಾನ
ಹೊಸದಿಲ್ಲಿ,ಜ.26: ಜಮ್ಮು-ಕಾಶ್ಮೀರದಲ್ಲಿ ಬೆನ್ನುಬೆನ್ನಿಗೆ ಭಯೋತ್ಪಾದಕರ ವಿರುದ್ಧದ ಮೂರು ಕಾರ್ಯಾಚರಣೆಳಲ್ಲಿ ಅಪ್ರತಿಮ ಶೌರ್ಯವನ್ನು ಮೆರೆದು ಹುತಾತ್ಮರಾದ ವಿಶೇಷ ಪಡೆಯ ಲಾನ್ಸ್ ನಾಯಕ್ ಮೋಹನನಾಥ್ ಗೋಸ್ವಾಮಿ ಅವರಿಗೆ ಮಂಗಳವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನಿಸಿದರು. 11ದಿನಗಳ ಕಾಲ ನಡೆದಿದ್ದ ಈ ಕಾರ್ಯಾಚರಣೆಗಳಲ್ಲಿ ಒಟ್ಟೂ 10 ಭಯೋತ್ಪಾದಕರು ಬಲಿಯಾಗಿದ್ದು.ಓರ್ವ ಜೀವಂತ ಸೆರೆ ಸಿಕ್ಕಿದ್ದ.
ದೇಶದ 67ನೇ ಗಣರಾಜ್ಯೋತ್ಸವದಲ್ಲಿ ಗೋಸ್ವಾಮಿಯವರ ಪತ್ನಿ ಭಾವನಾ ಗೋಸ್ವಾಮಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕುಪ್ವಾರಾ ಜಿಲ್ಲೆಯ ಹಫ್ರುದಾ ಅರಣ್ಯದಲ್ಲಿ ಭಯೋತ್ಪಾದಕರೊಂದಿಗಿನ ಭೀಷಣ ಗುಂಡಿನ ಕಾಳಗದಲ್ಲಿ ಗೋಸ್ವಾಮಿ ವೀರಮರಣವನ್ನಪ್ಪಿದ್ದರು. ಹುತಾತ್ಮರಾಗುವ ಮುನ್ನ ಇಬ್ಬರು ಭಯೋತ್ಪಾದಕರನ್ನು ಸ್ವಯಂ ಕೊಂದಿದ್ದ ಅವರು ಇನ್ನಿಬ್ಬರನ್ನು ಕೊಲ್ಲುವಲ್ಲಿ ನೆರವಾಗಿದ್ದರು.
ಕಳೆದ ವರ್ಷದ ಆ.23ರಂದು ಹಂದ್ವಾರಾದ ಖುರ್ಮುರ್‌ನಲ್ಲಿ, ಬಳಿಕ ಆ.26-27ರಂದು ರಫಿಯಾಬಾದ್‌ನಲ್ಲಿ ಮತ್ತು ಅಂತಿಮವಾಗಿ ಸೆ.2ರಂದು ಕುಪ್ವಾರಾದ ಹಫ್ರುದಾ ಅರಣ್ಯದಲ್ಲಿ ನಡೆದಿದ್ದ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಗೋಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದರು.