ಉಡುಪಿ : ಕ್ರೀಡೆಯಿಂದ ಜೀವನ ಶಿಸ್ತುಬದ್ಧ: ನೀನಾ ಕೊಯ್ಲ
ಉಡುಪಿ, ಜ.26: ಯಾವುದೇ ಪ್ರಕಾರದ ಕ್ರೀಡಾಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಶಿಸ್ತು ವೃದ್ಧಿಯಾಗುತ್ತದೆ. ಈ ರೀತಿ ಬೆಳವಣಿಗೆಯಾದ ಶಿಸ್ತು ಮತ್ತು ನಿಯಮಪಾಲನೆಯು ವೃತ್ತಿಜೀವನ ಹಾಗೂ ಕೌಟುಂಬಿಕ ಜೀವನದಲ್ಲಿ ಮಹತ್ವದ್ದನ್ನು ಸಾಸಲು ಪೂರಕವಾಗುತ್ತದೆ ಎಂದು ಉಡುಪಿ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾದ ಸಹಾಯಕ ಮಹಾಪ್ರಬಂಧಕಿ ನೀನಾ ಕೊಯ್ಲಾ ಹೇಳಿದ್ದಾರೆ.
ಮಂಗಳೂರು ವಿವಿ ಹಾಗೂ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ತೆಂಕನಿಡಿಯೂರಿನಲ್ಲಿ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೆಂಕನಿಡಿಯೂರು ಗ್ರಾಪಂನ ಮಾಜಿ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮುಖ್ಯ ಅಥಿತಿಗಳಾಗಿದ್ದರು. ಪ್ರಾಂಶುಪಾಲೆ ಡಾ. ನಿಕೇತನ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರುಗಳ ಸಂಘದ ಅಧ್ಯಕ್ಷ ವೇಣುಗೋಪಾಲ ನೋಂಡ, ವಾಲಿಬಾಲ್ ಪಂದ್ಯಾಟಕ್ಕೆ ವಿವಿಯಿಂದ ನಿಯೋಜಿತ ವೀಕ್ಷಕ ಅರುಣ್ ಶೆಟ್ಟಿ, ತೆಂಕನಿಡಿಯೂರು ಗ್ರಾಪಂ ಸದಸ್ಯ ಕೃಷ್ಣ ಎಸ್. ಅಮಿನ್, ಉದ್ಯಮಿ ಶಶಿಕಾಂತ್, ಪ್ರೊ.ಮಹೇಶ್ ರಾವ್ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಪಂದ್ಯಾಟದ ಸಂಚಾಲಕ ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಕನ್ನಡ ಸಹಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ವಂದಿಸಿದರು. ಡಾ. ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 34 ಕಾಲೇಜುಗಳ ವಾಲಿಬಾಲ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.