ಪಾಕ್: ಭಯೋತ್ಪಾದಕ ದಾಳಿ ಸಾಧ್ಯತೆ; ಶಾಲಾ, ಕಾಲೇಜು ಮುಚ್ಚುಗಡೆ
ಇಸ್ಲಾಮಾಬಾದ್,ಜ.26: ಭಯೋತ್ಪಾದಕ ದಾಳಿ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ದೊರೆತಿರುವ ಹಿನ್ನೆಲೆಯಲ್ಲಿ ಪಾಕ್ ಅಧಿಕಾರಿಗಳು, ಪಂಜಾಬ್ ಪ್ರಾಂತ್ಯದ ಎಲ್ಲಾ ಶಾಲಾ,ಕಾಲೇಜುಗಳನ್ನು ಮುಚ್ಚುಗಡೆಗೊಳಿಸಿದ್ದಾರೆ. ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನದಿಂದ ನುಸುಳಿರುವ 12 ಮಂದಿ ತಾಲಿಬಾನ್ ಬಂಡುಕೋರರು ಪಾಕಿಸ್ತಾನದ ಶಾಲೆಗಳ ಮೇಲೆ ಆತ್ಮಹತ್ಯೆ ದಾಳಿಗಳನ್ನು ನಡೆಸಲು ಸಂಚುಹೂಡಿದ್ದಾರೆಂಬ ಗುಪ್ತಚರ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಪಂಜಾಬ್ ಪ್ರಾಂತದ ಶಾಲೆಗಳು ಈ ತಿಂಗಳ ಅಂತ್ಯದವರೆಗೂ ಮುಚ್ಚಿರುತ್ತವೆಯೆಂದು ಪ್ರಾಂತ್ಯದ ಶಿಕ್ಷಣ ಸಚಿವ ರಾನಾ ಮಸೂದ್ ಅಹ್ಮದ್ ತಿಳಿಸಿದ್ದಾರೆ. ಆದರೆ ಉಗ್ರರ ದಾಳಿಯ ಬೆದರಿಕೆ ಸಾಧ್ಯತೆಯನ್ನು ಅವರು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ. ಕಠೋರವಾದ ಚಳಿ ಹಾಗೂ ದಟ್ಟವಾದ ಮಂಜಿನ ಕಾರಣದಿಂದಾಗಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ವಾಯವ್ಯ ಪ್ರಾಂತದ ಬಚ್ಚಾಖಾನ್ ವಿವಿಯ ಮೇಲೆ ಉಗ್ರರು ದಾಳಿ ನಡೆಸಿ ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ 21 ಮಂದಿಯನ್ನು ಹತ್ಯೆಗೈದ ಘಟನೆ ನಡೆದ ಒಂದು ವಾರದ ಬಳಿಕ ಪಾಕ್ ಸರಕಾರವು ಮತ್ತೆ ಶಿಕ್ಷಣಸಂಸ್ಥೆಗಳ ಮೇಲೆ ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ.