ದ.ಕ. ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆಗೆ ಚಾಲನೆ
ಮಂಗಳೂರು, ಜ.27: ಕರಾವಳಿ ಉತ್ಸವದ ಅಗವಾಗಿ ದ.ಕ. ಜಿಲ್ಲಾ ಮಟ್ಟದ ಎರಡು ದಿನಗಳ ಪುರುಷರ ಮತ್ತು ಮಹಿಳೆಯರ ಭಾರ ಎತ್ತುವ ಸ್ಪರ್ಧೆಗೆ ಇಂದು ನಗರದ ಪುರಭವನದಲ್ಲಿ ಚಾಲನೆ ನೀಡಲಾಯಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ವೈಟ್ ಲಿಫ್ಟಿಂಗ್ ಅಸೋಸಿಯೇಶನ್‌ನ ಸ್ಥಾಪಕ ಸದಸ್ಯ ನಗರ ನಾರಾಯಣ ಶೆಣೈ, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನೇತೃತ್ವದಲ್ಲಿ ಇದೀಗ ಮತ್ತೆ ಭಾರ ಎತ್ತುವ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದ್ದು, ಈ ಕ್ರೀಡೆಯನ್ನು ಬೆಳೆಸುವಲ್ಲಿ ಇನ್ನಷ್ಟು ಪ್ರೋತ್ಸಾಹ ದೊರೆಯಬೇಕು ಎಂದರು.
70ರ ದಶಕದಲ್ಲಿ ಈ ಕ್ರೀಡೆಗೆ ಇದ್ದ ಆಸಕ್ತಿ ಇಂದಿನ ಯುವಕರಲ್ಲಿ ಇಲ್ಲವಾಗಿದೆ. ವ್ಯಾಯಾಮ ಶಾಲೆಗೆ ಹೋಗಿ ಈ ಕ್ರೀಡೆ ಬಗ್ಗೆ ತರಬೇತಿ ಪಡೆಯುವವರ ಸಂಖ್ಯೆ ವಿರಳವಾಗುತ್ತಿದೆ. ಹಾಗಿದ್ದರೂ ಕರ್ನಾಟಕದ ಇತರೆಲ್ಲಾ ಜಿಲ್ಲೆಗಳಿಗಿಂತಲೂ ದ.ಕ. ಜಿಲ್ಲೆಯಲ್ಲಿ ಈ ಕ್ರೀಡೆಗೆ ಪೂರಕವಾದ ತರಬೇತು ಸಂಸ್ಥೆಗಳು, ಕ್ರೀಡಾಳುಗಳು ಇರುವುದು ಸಂತಸದ ಸಂಗತಿ ಎಂದವರು ಹೇಳಿದರು.
ಅಧ್ಯಕ್ಷತೆಯನ್ನು ಅಸೋಸಿಯೇಶನ್ ಅಧ್ಯಕ್ಷ ಕಮಲಾಕ್ಷ ಅಮೀನ್ ವಹಿಸಿದ್ದರು. ಸರಸ್ವತಿ ಪುತ್ರನ್, ಲಿಲ್ಲಿ ಪಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ವೈಟ್ ಲಿಫ್ಟಿಂಗ್ ಅಸೋಸಿಯೇಶನ್‌ನ ಕಾರ್ಯದರ್ಶಿ ಪುಷ್ಪರಾಜ್ ಹೆಗ್ಡೆ ಸ್ವಾಗತಿಸಿದರು. ಕೋಶಾಧಿಕಾರಿ ಶಾಂತಿರಾಜ್ ಕಂಬ್ಳಿ ವಂದಿಸಿದರು. ನವೀನ್ ಕಾರ್ಯಕ್ರಮ ನಿರೂಪಿಸಿದರು.