ರೆಂಜಾಳದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಸುಳ್ಯ: ದೈವ ಭಕ್ತಿಯಿಂದ ಬದುಕಿನ ಉದ್ಧಾರ-ಸುಬ್ರಹ್ಮಣ್ಯ ಸ್ವಾಮೀಜಿ
ಸುಳ್ಯ: ಮರ್ಕಂಜ ಮತ್ತು ನೆಲ್ಲೂರುಕೆಮ್ರಾಜೆ ಗ್ರಾಮಕ್ಕೊಳಪಟ್ಟ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಿತು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಸಕಾರಾತ್ಮಕವಾದ ಸ್ಪಂದನ ಶಕ್ತಿ ಮನುಷ್ಯನ ಬದುಕಿನ ಉದ್ಧಾರಕ್ಕೆ ಕಾರಣವಾಗುತ್ತದೆ, ಮನುಷ್ಯನಲ್ಲಿ ಒಳ್ಳೆಯ ಭಾವನೆ ಉಂಟು ಮಾಡಿ ಅಭೂತಪೂರ್ವವಾದ ದೇವತಾಶಕ್ತಿಯನ್ನು ತನ್ನ ಹೃದಯದಲ್ಲಿ ಆರಾಧನೆ ಮಾಡಿ ಆ ಮೂಲಕ ತನ್ನನ್ನು ಉದ್ಧಾರ ಮಾಡಲು ಒಂದು ಅವಕಾಶವಾಗುತ್ತದೆ ಎಂದರು. ಜಡರೂಪದಲ್ಲಿರುವ ದೇವರ ಪ್ರತಿಮೆಗೆ ತಂತ್ರಿವರ್ಯರು ಚೈತನ್ಯವನ್ನು ನೀಡಿದಾಗ ದೇವರ ಶಕ್ತಿ ವೃದ್ಧಿಯಾಗುತ್ತದೆ. ಅದನ್ನು ನಮ್ಮ ಅಂತರಾಳದಲ್ಲಿ ಅಳವಡಿಸಿಕೊಂಡಾಗ ನಮ್ಮ ಪೂಜೆ ಪುನಸ್ಕಾರಗಳು ಸಾಫಲ್ಯವನ್ನು ಕಾಣುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ, ನಮ್ಮಲ್ಲಿ ಭಕ್ತಿ ಮತ್ತು ನಂಬಿಕೆಗಳು ಬಂದಾಗ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು. ಭಕ್ತಿ ಕಡಿಮೆಯಾದಾಗ ನಾವು ಬೇರೆ ಅಪೇಕ್ಷೆ ಮಾಡುತ್ತೇವೆ. ಯಾವಾಗ ಭಕ್ತಿ ಇರುತ್ತದೋ, ಆಗ ನಮ್ಮ ಕಾರ್ಯ ನೆರವೇರುತ್ತದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಪ್ರಕಾಶ್ ಮಲ್ಪೆಯವರು, ನಾವು ದಿನನಿತ್ಯದ ಎಲ್ಲ ಕೆಲಸ ಕಾರ್ಯಗಳಲ್ಲೂ ದೇವರನ್ನು ಕಾಣುತ್ತೇವೆ. ಕನ್ನಡ ಭಾಷೆಯಲ್ಲಿ ದೇವರ ಚೈತನ್ಯವಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಮೊದಲನೆಯದಾಗಿ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಯ್ಯ ಭಟ್, ಗಣೇಶ್ ಪ್ರಿಂಟರ್ಸ್ ಮಾಲಕ ಉಮೇಶ್ ಪಿ.ಕೆ., ಸಿಂಡಿಕೇಟ್ ಸದಸ್ಯ ಡಾ.ರಘು, ಗ್ರಾ.ಪಂ. ಅಧ್ಯಕ್ಷ ಮೋನಪ್ಪ ಪೂಜಾರಿ ಆಗಮಿಸಿದ್ದರು. ವೇದಿಕೆಯಲ್ಲಿ ಪಂಚಸ್ಥಾಪನೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಿಂಗಪ್ಪ ನಾಯ್ಕ ತೋಟಛಾವಡಿ, ಕಾರ್ಯಾಧ್ಯಕ್ಷ ಮೋಹನ್ ರಾಂ ಸುಳ್ಳಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಕಾಂತ್ ಗುಳಿಗಮೂಲೆ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಶಾಸ್ತ್ರಿ ದೋಳ ಸ್ವಾಗತಿಸಿ, ಐತ ರೆಂಜಾಳ ವಂದಿಸಿದರು. ವಿನಯ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು.