ಸುಳ್ಯದಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ : ಮಹಮ್ಮದ್ ಕುಂಞಿ ವಿಟ್ಲ
ಸುಳ್ಯ: ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸುಳ್ಯ ತಾಲೂಕಿನ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ ಹೇಳಿದರು.
ಸುಳ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದು, ಜೆಡಿಎಸ್ ಪರ ಒಲವು ಹೊಂದಿದ್ದಾರೆ. ಸುಳ್ಯ ಹೊರತುಪಡಿಸಿ ಅಗತ್ಯ ಇರುವಲ್ಲಿ ಸಿಪಿಎಂ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಸುಳ್ಯದಲ್ಲಿ ನಾಯಕರು ಮತ್ತು ಕಾರ್ಯಕರ್ತರು ಏಕಪಕ್ಷೀಯವಾಗಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ ಕಾರಣ, ಮೈತ್ರಿಯ ಪ್ರಶ್ನೆ ಉದ್ಭವಿಸದು ಎಂದು ಹೇಳಿದರು. ಜಿಲ್ಲೆಯ ನಾಲ್ವರು ಸಚಿವರು ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಆಡಳಿತ ಯಂತ್ರ ಬಜರಂಗದಳದ ಕೈಯಲ್ಲಿದೆ. ಬಜರಂಗದಳ ಪ್ರತಿಭಟನೆ ನಡೆಸಿದರೆ, ಅವರ ಬೇಡಿಕೆಗಳಿಗೆ ತಕ್ಕಂತೆ ಜಿಲ್ಲಾಡಳಿತ ಸ್ಪಂದಿಸುತ್ತಿದೆ ಎಂದ ಅವರು, ಬಜರಂಗದಳದ ಅಣತಿಯಂತೆ ಆಡಳಿತ ನಡೆಸುವ ಕಾಲ ಕಾಂಗ್ರೆಸ್‌ಗೆ ಎದುರಾಗಿರುವುದು ದುರಂತ ಎಂದು ಟೀಕಿಸಿದರು. ಎತ್ತಿನಹೊಳೆ ಯೋಜನೆ ಬಿಜೆಪಿಯ ಕೂಸು. ಈಗ ಅವರೇ ಹೋರಾಟಕ್ಕೆ ಇಳಿದಿರುವುದು ವಿಪರ್ಯಾಸ. ಜನಾರ್ದನ ಪೂಜಾರಿ ಯೋಜನೆಯ ವಿರೋಧದ ನೆಪದಲ್ಲಿ ಪ್ರಚಾರ ಬಯಸುತ್ತಿದ್ದಾರೆ. ತನ್ಮೂಲಕ ಮುಂದಿನ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ತಂತ್ರ ರೂಪಿಸಿದ್ದಾರೆ. ನೆಲ-ಜಲ-ವಿಚಾರದಲ್ಲಿ ಜಿಲ್ಲೆಗೆ ಅನ್ಯಾಯವಾದಾಗ ಜೆಡಿಎಸ್, ರಾಜಕೀಯ ಬೆರೆಸದೆ ನ್ಯಾಯಯುತವಾಗಿ ಹೋರಾಟ ನಡೆಸಿದೆ ಎಂದು ಹೇಳಿದರು. ತಾಲೂಕು ಘಟಕದ ಅಧ್ಯಕ್ಷ ಬಿ.ದಯಾಕರ ಆಳ್ವ ಮಾತನಾಡಿ, ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಆಕಾಂಕ್ಷಿತರ ಪಟ್ಟಿ ತಯಾರಿಸಲಾಗಿದೆ. ಅರಂತೋಡು ಜಿ.ಪಂ. ಕ್ಷೇತ್ರಕ್ಕೆ ರೋಹನ್ ಪೀಟರ್, ಎ.ಕೆ.ಹಸೈನಾರ್, ಐ.ಜಿ. ಇಸ್ಮಾಯಿಲ್, ಸುಕುಮಾರ್ ಕೋಡ್ತಗುಳಿ ಹಾಗೂ ಬೆಳ್ಳಾರೆ ಜಿ.ಪಂ. ಕ್ಷೇತ್ರಕ್ಕೆ ಇಕ್ಬಾಲ್ ಎಲಿಮಲೆ, ದಯಾಕರ ಆಳ್ವ, ಜಾಕೆ ಮಾಧವ ಗೌಡ ಅವರ ಹೆಸರು ಚಾಲ್ತಿಯಲ್ಲಿದ್ದು, ಕಾರ್ಯಕರ್ತರ ಜತೆ ಚರ್ಚಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ವಕ್ತಾರ ರಾಂ ಗಣೇಶ್, ಪಕ್ಷದ ಮುಖಂಡರಾದ ರಾಕೇಶ್ ಕುಂಟಿಕಾನ, ರೋಹನ್ ಪೀಟರ್, ನಾರಾಯಣ ಅಗ್ರಹಾರ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಜೀವನ್ ನಾರ್ಕೋಡ್, ಪ್ರವೀಣ್ ಮುಂಡೋಡಿ ಮೊದಲಾದವರು ಉಪಸ್ಥಿತರಿದ್ದರು.