ದನ ಸಾಗಾಟ ಪ್ರಕರಣ: ಕೋರ್ಟಿಗೆ ಬಾರದ ದೂರುದಾರರು
ಸುಳ್ಯ: 2 ವರ್ಷಗಳ ಹಿಂದೆ ನಾರ್ಕೋಡಿನಲ್ಲಿ ನಡೆದ ದನ ಸಾಗಾಟದವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಳವು ದೂರು ನೀಡಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಕೋರ್ಟಿಗೆ ಹಾಜರಾಗಿಲ್ಲ ಎಂದು ಕುಂಭಕ್ಕೋಡು ಜಮಾತ್ ಅಧ್ಯಕ್ಷ ಎ.ಮಹಮ್ಮದ್ ಏಣಾವರ ಹೇಳಿದ್ದಾರೆ.
ನಾರ್ಕೋಡಿನಲ್ಲಿ 2 ವರ್ಷಗಳ ಹಿಂದೆ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರಿಂದ ಎರಡು ದನಗಳನ್ನು ಖರೀದಿಸಿ ತನ್ನ ಮನೆಗೆ ಸಿದ್ದಿಕ್ ಹಾಗೂ ಶಫೀಕ್ ಅವರು ತನ್ನ ಮನೆಗೆ ಸಾಗಿಸುತ್ತಿದ್ದಾಗ ಅವರ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ ಪ್ರಕರಣ ನಡೆದಿತ್ತು. ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಮಹಮ್ಮದ್ ಘಟನೆ ನಡೆದ ಬಳಿಕ ತಾಲೂಕು ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಅವರು ತನ್ನ ಮನೆಯಿಂದ ದನ ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ಸುಳ್ಳು ದೂರನ್ನು ನೀಡಿದ್ದರು. ಘಟನೆಗೆ ಸಂಬಂಧಿಸಿ ಸಿದ್ದಿಕ್, ಶಫೀಕ್ ಹಾಗೂ ಇಬ್ರಾಹಿಂ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಜಾಮೀನಿನಲ್ಲಿ ಹೊರ ಬಂದ ಬಳಿಕ ಆರೋಪಿಗಳು ಕಾನತ್ತೂರಿಗೆ ದೂರು ನೀಡಿದ್ದು, ಅಲ್ಲಿಗೂ ಜಯಪ್ರಕಾಶ್ ಕುಂಚಡ್ಕ ಹಾಜರಾಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಹಲವು ಬಾರಿ ವಿಚಾರಣೆಗೆ ಬಂದರೂ ಅವರು ಹಾಜರಾಗಿಲ್ಲ. ಹಾಗಾಗಿ ನ್ಯಾಯಾಲಯ ಜಯಪ್ರಕಾಶ್ ಕುಂಚಡ್ಕ ಅವರಿಗೆ ವಾರಂಟ್ ಹೊರಡಿಸಿತ್ತು. ಬಳಿಕ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಹಾಗಿದ್ದೂ ಪೊಲೀಸರು ಅವರನ್ನು ಹಾಜರು ಪಡಿಸದೇ ಇರುವುದರಿಂದ ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ಘೋಷಿಸಿ ವರದಿ ನೀಡುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ ಎಂದರು.
ಸಿದ್ದಿಕ್, ಶಫೀಕ್, ಇಬ್ರಾಹಿಂ ಹಾಗೂ ಕಬೀರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.