ಉಡುಪಿ, ಸಂಗ್ರಹಿತ ರಕ್ತ ಸದುಪಯೋಗವಾಗಲಿ: ಡಾ.ವಿಶಾಲ್
ಉಡುಪಿ, ಜ.27: ರಕ್ತದಾನ ಶಿಬಿರಗಳಲ್ಲಿ ಸಂಗ್ರಹಿತವಾಗುವ ಅಮೂಲ್ಯ ರಕ್ತ ತ್ವರಿತಗತಿಯಲ್ಲಿ ಸಂಪೂರ್ಣ ಸದುಪಯೋಗವಾಗುವಂತೆ ನೋಡಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಎಂಜಿಎಂ ಕಾಲೇಜಿನ ಎನ್ನೆಸ್ಸೆಸ್, ಎನ್‌ಸಿಸಿ ಹಾಗೂ ರೆಡ್‌ಕ್ರಾಸ್ ಘಟಕ, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಮತ್ತು ಕೆಎಂಸಿ ಮಣಿಪಾಲ ರಕ್ತನಿಧಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದು ನಡೆದ ‘ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತುರ್ತು ರಕ್ತದ ಅಗತ್ಯವಿರುವ ಬಡತನ ರೇಖೆಗಿಂತ ಕೆಳಗಿನ ರೋಗಿಗಳಿಗೆ ಹಾಗೂ ರಕ್ತಸ್ರಾವಕ್ಕೊಳಗಾದ ಗರ್ಭಿಣಿಯರಿಗೆ ಉಚಿತವಾಗಿ ರಕ್ತ ನೀಡುವ ವ್ಯವಸ್ಥೆ ಇದ್ದು, ಇದರ ಪ್ರಯೋಜವನ್ನು ಜನಸಾಮಾನ್ಯರು ಪಡೆಯುವಂತೆ ನೋಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ, ರಕ್ತದಾನ ಮಹಾದಾನ. ಜನರು ರಕ್ತದ ಮಹತ್ವವನ್ನು ಅರಿತು ರಕ್ತವನ್ನು ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ರಕ್ತದ ಕೊರತೆಯಿಂದ ಯಾರೂ ಸಾಯಬಾರದು. ಇದು ನಮ್ಮ ಗುರಿಯಾಗಿದೆ. ಆರೋಗ್ಯವಂತ ಮನುಷ್ಯ ರಕ್ತದಾನ ಮಾಡುವುದರಲ್ಲಿ ತಪ್ಪಿಲ್ಲ ಎಂದ ಅವರು, ದೇಶದಲ್ಲಿ ಶೇ.6ರಷ್ಟು ಮಹಿಳೆಯರು ಮಾತ್ರ ರಕ್ತದಾನ ಮಾಡುತಿದ್ದಾರೆ. ಅದೇ ಪಾಶ್ಚಿಮಾತ್ಯ ದೇಶಗಳಲ್ಲಿ ಶೇ.60ಕ್ಕೂ ಅಧಿಕ ಮಹಿಳೆಯರು ರಕ್ತದಾನ ಮಾಡುತಿದ್ದಾರೆ. ಈ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಬೇಕು ಎಂದರು.
ಸಮಾರಂಭದಲ್ಲಿ ರಕ್ತದಾನ ಶಿಬಿರಗಳನ್ನು ಸಂಘಟಿಸುವ ಸಂಘಟಕರು ಹಾಗೂ ಅತೀಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ ಕಾಪುವಿನ ಲೀಲಾಧರ ಶೆಟ್ಟಿ, ಸದಾನಂದ ಬಳ್ಕೂರು, ಸತೀಶ್ ಸಾಲ್ಯಾನ್, ದಿವಾಕರ ಹಾಗೂ ಕಾರ್ಕಳದ ಮಹಮ್ಮದ್ ಶರೀಫ್ ಅವರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯ್ಕೆ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ.ಎನ್.ರಜನಿ, ಕೆಎಂಸಿ ಬ್ಲಡ್ ಬ್ಯಾಂಕ್‌ನ ಡಾ. ಶಮಿ ಶಾಸ್ತ್ರಿ, ಎಂಜಿಎಂ ಕಾಲೇಜಿನ ಪ್ರಾಂಶು ಪಾಲರಾದ ಪ್ರೊ.ಕುಸುಮಾ ಕಾಮತ್, ಜಿಲ್ಲಾ ರೆಡ್‌ಕ್ರಾಸ್‌ನ ಬಸ್ರೂರು ರಾಜೀವ್ ಶೆಟ್ಟಿ ಉಪಸ್ಥಿತರಿದ್ದರು.
ಡ್ಯಾಪ್ಕೊದ ಜಿಲ್ಲಾ ಮೇಲ್ವಿಚಾರಕರಾದ ಮಹಾಬಲೇಶ್ವರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲಂದೂರು ಮಂಜುನಾಥ ಕಾರ್ಯಕ್ರಮ ನಿರ್ವಹಿಸಿ, ಎಂಜಿಎಂ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಭಾಸ್ಕರ ರಾವ್ ವಂದಿಸಿದರು.