ನಕಲಿ ಎನ್‌ಕೌಂಟರ್ ಪ್ರಕರಣ: ನಿರಾಯುಧನಾಗಿದ್ದ ಯುವಕನನ್ನು ನಾನು ನಿರ್ದಯೆಯಿಂದ ಕೊಂದಿದ್ದೆ
ಮಣಿಪುರ ನಕಲಿ ಎನ್‌ಕೌಂಟರ್ ಪ್ರಕರಣ : ಆರು ವರ್ಷಗಳ ಬಳಿಕ ಹಂತಕ ಪೊಲೀಸನ ತಪ್ಪೊಪ್ಪಿಗೆ
ಇಂಫಾಲ,ಜ.27: ಮಣಿಪುರದಲ್ಲಿ ಉಗ್ರಗಾಮಿಯೆಂದು ಶಂಕಿಸಿ 22ರ ಯುವಕನೋರ್ವನನ್ನು ಗುಂಡಿಟ್ಟು ಹತ್ಯೆಗೈದ ಆರು ವರ್ಷಗಳ ಬಳಿಕ ಇದೀಗ ಆತ ನಿರಾಯುಧನಾಗಿದ್ದ ಮತ್ತು ತಾನು ಆತನನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದೆ ಎಂದು ಪೋಲಿಸ್ ಸಿಬ್ಬಂದಿಯೋರ್ವ ತಪ್ಪೊಪ್ಪಿಕೊಂಡಿದ್ದಾನೆ.
ಪೀಪಲ್ಸ್ ಲಿಬರೇಷನ್ ಆರ್ಮಿಯ ಸದಸ್ಯನೆಂದು ಶಂಕಿಸಲಾಗಿದ್ದ ಚುಂಗ್‌ಖಾಮ್ ಸಂಜಿತ್ ಮೀತಿಯನ್ನು 2009ರಲ್ಲಿ ರಾಜ್ಯ ರಾಜಧಾನಿ ಇಂಫಾಲದ ಜನನಿಬಿಡ ರಸ್ತೆಯಲ್ಲಿ ಪೊಲೀಸರು ಗುಂಡಿಟ್ಟು ಕೊಂದಿದ್ದರು. ವಾಸ್ತವದಲ್ಲಿ ಸಂಜಿತ್ ಆಸ್ಪತ್ರೆಯೊಂದರಲ್ಲಿ ಅಟೆಂಡಂಟ್ ಎಂದು ಕೆಲಸ ಮಾಡುತ್ತಿದ್ದನೆನ್ನಲಾಗಿದೆ.
ಈ ನಕಲಿ ಎನ್‌ಕೌಂಟರ್‌ನಲ್ಲಿ ಸಂಜಿತ್‌ನನ್ನು ಬಲಿ ತೆಗೆದುಕೊಂಡಿದ್ದ ಹೆಡ್ ಕಾನ್‌ಸ್ಟೇಬಲ್ ಥೌನಾವ್‌ಜಾಮ್ ಹಿರೋಜಿತ್ ಸಿಂಗ್, ಹಿರಿಯ ಅಧಿಕಾರಿಯೋರ್ವರು ಸಂಜಿತ್‌ನ ‘ಕಥೆಯನ್ನು ಮುಗಿಸುವಂತೆ’ ತನಗೆ ಆದೇಶಿಸಿದ್ದರು ಎಂದು ಆರೋಪಿಸಿದ್ದಾನೆ. ಪೊಲೀಸ್ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಗಳು ಈ ಆದೇಶಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಆ ಹಿರಿಯ ಪೊಲೀಸ್ ಅಧಿಕಾರಿ ತನಗೆ ಭರವಸೆ ನೀಡಿದ್ದರು ಎಂದೂ ಸಿಂಗ್ ಹೇಳಿದ್ದಾನೆ.
ಸಂಜಿತ್‌ನನ್ನು ಕೊಂದಾಗ ತನಗೆ ಯಾವುದೇ ಪಶ್ಚಾತ್ತಾಪ ಉಂಟಾಗಿರಲಿಲ್ಲ, ಆದರೆ ಈಗ ತನಗೆ ಜೀವಭೀತಿಯಿರುವುದರಿಂದ ತಪ್ಪನ್ನೊಪ್ಪಿಕೊಳ್ಳುತ್ತಿರುವುದಾಗಿ ಸಿಂಗ್ ಹೇಳಿರುವುದನ್ನು ಆಂಗ್ಲ ದೈನಿಕವೊಂದು ಉಲ್ಲೇಖಿಸಿದೆ.
ಈ ಪ್ರಕರಣವನ್ನು ಪರಿಶೀಲಿಸುವುದಾಗಿ ಕೇರಳ ಪ್ರವಾಸದಲ್ಲಿದ್ದ ಗೃಹ ಸಚಿವ ರಾಜನಾಥ ಸಿಂಗ್ ಅವರು ತಿರುವನಂತಪುರಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ತಾವು ಸಂಜಿತ್‌ನನ್ನು ತಪಾಸಣೆಗೊಳಪಡಿಸಿದಾಗ ಆತ ಪಿಸ್ತೂಲನ್ನು ಹೊರತೆಗೆದು ಗುಂಡು ಹಾರಿಸಿ ಪರಾರಿಯಾಗಿದ್ದ. ಆತ ಮೈಮು ಫಾರ್ಮಸಿಯೊಳಗೆ ನುಗ್ಗಿದ್ದು ತಾವು ಆತನನ್ನು ಬೆನ್ನಟ್ಟಿದ್ದೆವು. ಆತ ಗುಂಡು ಹಾರಿಸಿದಾಗ ತಾವು ಪ್ರತಿದಾಳಿ ನಡೆಸಿದ್ದೆವು. ಆತನ ಬಳಿಯಿಂದ 9ಎಂಎಂ ಪಿಸ್ತೂಲನ್ನೂ ವಶಪಡಿಕೊಂಡಿದ್ದಾಗಿ ಪೊಲೀಸರು ಹೇಳಿಕೊಂಡಿದ್ದರು.
ಆದರೆ ಆ ವೇಳೆಯಲ್ಲಿ ಸಂಜಿತ್ ಬಳಿ ಮೊಬೈಲ್ ಫೋನ್ ಹೊರತುಪಡಿಸಿ ಬೇರೇನೂ ಇರಲಿಲ್ಲ ಎಂದು ಹಿರೋಜಿತ್ ಸಿಂಗ್ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಪ್ರಕರಣದ ತನಿಖೆಯನ್ನು 2010ರಲ್ಲಿ ಹಸ್ತಾಂತರಿಸಿಕೊಂಡಿದ್ದ ಸಿಬಿಐನಿಂದ ತನಿಖೆಗೊಳಗಾಗಿರುವ ಒಂಭತ್ತು ಪೊಲೀಸರಲ್ಲಿ ಹಿರೋಜಿತ್ ಸಿಂಗ್ ಓರ್ವನಾಗಿದ್ದಾನೆ.
2009,ಜುಲೈ 23ರಂದು ಪೊಲೀಸರು ಸಂಜಿತ್‌ನನ್ನು ಫಾರ್ಮಸಿಯೊಂದಕ್ಕೆ ಕರೆದೊಯ್ದಿದ್ದ ಮತ್ತು ಬಳಿಕ ಆತನ ಶವವನ್ನು ಹೊರತರುತ್ತಿರುವ ಚಿತ್ರಗಳು ಬಹಿರಂಗಗೊಂಡ ನಂತರ ಈ ಹತ್ಯೆಯು ಸಾರ್ವಜನಿಕ ಆಕ್ರೋಶವನ್ನು ಸೃಷ್ಟಿಸಿದೆ. ಸಮೀಪದಲ್ಲಿದ್ದ ಓರ್ವ ಮಹಿಳೆಯನ್ನೂ ಆಗ ಗುಂಡಿಟ್ಟು ಕೊಲ್ಲಲಾಗಿತ್ತು.
ನಾನು ಆತನ ಮೇಲೆ ಆರೇಳು ಬಾರಿ ಗುಂಡುಗಳನ್ನು ಹಾರಿಸಿದ್ದೆ. ಎಲ್ಲ ಗುಂಡುಗಳನ್ನೂ ಹೊಟ್ಟೆಗೇ ಗುರಿಯಾಗಿರಿಸಿದ್ದೆ. ನಾನು ಆತನನ್ನು ಕೊಲ್ಲಲು ವಾಪಸ್ ಬಂದಿದ್ದೇನೆ ಎಂದು ಸಂಜಿತ್‌ಗೆ ತಿಳಿದಿತ್ತು ಎನ್ನುವುದು ನನಗೆ ಖಚಿತವಿದೆ. ಆದರೆ ಆತ ಏನನ್ನೂ ಹೇಳಿರಲಿಲ್ಲ. ನಾವು ಮೊದಲು ಆತನನ್ನು ತಪಾಸಣೆ ಮಾಡಿದಾಗ ಯಾವುದೇ ಶಸ್ತ್ರ ಆತನ ಬಳಿಯಿರಲಿಲ್ಲ, ಕೇವಲ ಮೊಬೈಲ್ ಫೋನ್ ಮಾತ್ರ ಇತ್ತು ಎಂದು ಸಿಂಗ್ ತಿಳಿಸಿದ್ದಾನೆ.