×
Ad

ಮುಲ್ಕಿಯ ಶಾಂತ ಸಮುದ್ರ- ಶಾಂಭವಿ ನದಿಯಲ್ಲಿ ಜಲ ಸಾಹಸದ ಮೋಜು!

Update: 2016-01-27 21:41 IST

* 10 ರಾಜ್ಯಗಳ 200 ಮಂದಿ ಭಾಗಿ

ಮಂಗಳೂರು, ಜ. 27: ಮುಲ್ಕಿಯ ಸಮುದ್ರ ಕಿನಾರೆ ಹಾಗೂ ಶಾಂಭವಿ ನದಿಯಲ್ಲಿ ಜಲಸಾಹಸ ಕ್ರೀಡಾ ಪ್ರೇಮಿಗಳಿಗೆ ರೋಮಾಂಚಕ ಅನುಭವ. ಈಗಾಗಲೇ ಸರ್ಫಿಂಗ್‌ನಲ್ಲಿ ಹೆಸರು ಪಡೆದಿರುವ ಮುಲ್ಕಿಯ ಶಾಂತ ಸಮುದ್ರ ಕಿನಾರೆ ಸಾಹಸ ಪ್ರಿಯ ಚಲನಚಿತ್ರ ನಟರು, ಕ್ರಿಕೆಟ್ ತಾರೆಯನ್ನು ಆಕರ್ಷಿಸುವ ಮೂಲಕ ಹೆಸರು ಮಾಡಿದೆ. ಇದೀಗ ಅಲ್ಲಿ ಐದು ದಿನಗಳ ಕಾಲ ರಾಷ್ಟ್ರದ ವಿವಿಧ ರಾಜ್ಯಗಳ ರೋವರ್ಸ್‌ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಜಲ ಸಾಹಸ ಶಿಬಿರಕ್ಕೆ ಸಕಲ ಸಿದ್ಧತೆಗಳು ನಡೆದಿವೆ.

  

ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಮುಲ್ಕಿಯಲ್ಲಿ ಈ ರಾಷ್ಟ್ರ ಮಟ್ಟದ ಶಿಬಿರಕ್ಕೆ ಇದೇ ಪ್ರಥಮ ಬಾರಿಗೆ ಅವಕಾಶ ದೊರಕಿದೆ. ಇಂದಿನಿಂದ ಜ.31ರವರೆಗೆ ನಡೆಯಲಿರುವ ಈ ಜಲ ಸಾಹಸ ಶಿಬಿರದಲ್ಲಿ 10 ರಾಜ್ಯಗಳ 200ಮಂದಿ ಭಾಗವಹಿಸಲಿದ್ದಾರೆ. ನೀರಿನಲ್ಲಿ ನಡೆಸುವ ವಿಶಿಷ್ಟ ರೀತಿಯ ಕ್ರೀಡೆಗಳಾದ ಸರ್ಫಿಂಗ್, ಜೆಟ್‌ಸ್ಕೈ, ಕಯಾಕಿಂಗ್ ಮೊದಲಾದವುಗಳು ಹಾಗೂ ಪ್ರಕೃತಿ ವಿಕೋಪಗಳಿಂದ ಉಂಟಾಗಬಹುದಾದ ದುರಂತಗಳ ಸಂದರ್ಭ ಜನರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಪೂರಕವಾದ ವಿವಿಧ ರೀತಿಯ ರಕ್ಷಣಾ ಕಾರ್ಯಗಳ ಬಗ್ಗೆ ತರಬೇತಿಯನ್ನು ನೀಡಿ ಮಕ್ಕಳಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸುವ ಉದ್ದೇಶದಿಂದ ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಹಿರಿಯ ವಿದ್ಯಾರ್ಥಿಗಳ ವಿಭಾಗವಾಗಿರುವ ರೋವರ್ಸ್ ಮತ್ತು ರೇಂಜರ್ಸ್‌ಗಳಿಗಾಗಿ ನಡೆಯಲಿದೆ. ಬೆಳಗ್ಗೆ 9ರಿಂದ 1ರವರಗೆ ಸಾಹಸ ಪ್ರದರ್ಶನ ನಡೆಯಲಿದ್ದು, ಈ ಸಂದರ್ಭ ಸರ್ಫಿಂಗ್ ಮಾತ್ರವಲ್ಲದೆ ಸಾಹಸ ಪ್ರದರ್ಶನ, ಕ್ರೀಡೆಗಳು ನಡೆಯಲಿದೆ.

ಮಧ್ಯಾಹ್ನ ಬಳಿಕ ಪ್ರಾಕೃತಿಕ ವಿಕೋಪ ನಿರ್ವಹಣಾ ತರಬೇತಿ ಸೇರಿದಂತೆ ನಾನಾ ಸಾಹಸ ಪ್ರದರ್ಶನ ನಡೆಯಲಿದೆ. ಸಂಜೆ ದೇಶಾದ್ಯಂತ ನಾನಾ ಕಡೆಯಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಶಿಬಿರಾರ್ಥಿಗಳಿಗೆ ಪ್ರತಿನಿತ್ಯ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಯೂ ಲಭ್ಯವಾಗಲಿದೆ. ಇಷ್ಟು ಮಾತ್ರವಲ್ಲದೆ ಟ್ಯೂಬ್, ಡ್ರಮ್, ಬೂಂಬ್‌ಗಳ ಮೂಲಕ ಜಲಸಾಹಸ ಕ್ರೀಡೆಯೂ ಇಲ್ಲಿ ನಡೆಯಲಿದೆ. ಉದ್ಘಾಟನಾ ದಿನವಾದ ಇಂದು ಕರ್ನಾಟಕದ 85, ಜಾರ್ಕಾಂಡ್, ಮಧ್ಯಪ್ರದೇಶ , ಉತ್ತರ ಪ್ರದೇಶ, ಪಶ್ಚಿಮ ಬಂಗಾಳ , ಗುಜರಾತ್ , ಈಸ್ಟ್ ಎಂಡ್ ವೆಸ್ಟ್ ರೈಲ್ವೆ ಗಳಿಂದ ತಲಾ 5ರಂತೆ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಸೇರಿದಂತೆ 115ಮಂದಿ ಆಗಮಿಸಿದ್ದಾರೆ. ಸ್ಥಳೀಯರಿಗೆ ಹೆಚ್ಚಿನ ಒತ್ತು ನೀಡಲಾಗುವ ದೃಷ್ಟಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ತಲಾ 50 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಜಲ ಕ್ರೀಡಾ ತರಬೇತುದಾರರಿಂದ ನಡೆಯುವ ಈ ಶಿಬಿರದ ವೀಕ್ಷಣೆಗೂ ಸ್ಥಳೀಯ ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗ ಅವಕಾಶ ಕಲ್ಪಿಸಲಾಗಿದೆ.

ಜೆಟ್‌ಸ್ಕೈ ರೈಡ್ ಆನಂದಿಸಿದ ಸಚಿವ ಅಭಯ

ಉದ್ಘಾಟನಾ ಕಾರ್ಯಕ್ರಮಕ್ಕೆ ಮೊದಲು ಸಚಿವರಾದ ಅಭಯಚಂದ್ರ ಜೈನ್ ಹಾಗೂ ರಾಜ್ಯದ ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಸಚಿವ ನಾಗರಾಜ ಶೆಟ್ಟಿ ಸೇರಿದಂತೆ ಇತರ ಗಣ್ಯರು ಶಾಂಭವಿ ನದಿಯಲ್ಲಿ ಸ್ಪೀಡ್ ಬೋಟ್‌ನಲ್ಲಿ ಪ್ರಯಾಣಿಸಿ, ಸಮುದ್ರದಲ್ಲಿ ಸರ್ಫಿಂಗ್ ಪ್ರದರ್ಶನವನ್ನು ವೀಕ್ಷಿಸಿದರು. ಅಲ್ಲಿಂದ ಹಿಂತಿರುವ ವೇಳೆ ಸಚಿವ ಅಭಯಚಂದ್ರರು ಲೈಫ್ ಜಾಕೆಟ್ ತೊಟ್ಟು ಶಾಂಭವಿ ನದಿಯಲ್ಲಿ ಬೈಕ್ ಮಾದರಿಯ ಜೆಟ್‌ಸ್ಕೈ ರೈಡ್ ಮಾಡಿ ಆನಂದಿಸಿದರು.

ಭಯವೂ ಇದೆ, ಉತ್ಸಾಹವೂ ಇದೆ!

‘‘ಸಮುದ್ರವನ್ನು ದೂರದಿಂದ ನೋಡಿದ್ದೆ. ಆದರೆ ಇಷ್ಟು ಹತ್ತಿರದಿಂದ ನೋಡುತ್ತಿರುವುದು ಮಾತ್ರವಲ್ಲ, ಅದರಲ್ಲಿ ವಿವಿಧ ರೀತಿಯ ಸಾಹಸಗಳ ಅನುಭವ ಪಡೆಯುವ ಬಗ್ಗೆ ಒಂದು ರೀತಿಯಲ್ಲಿ ಭಯವೂ ಇದೆ, ಉತ್ಸಾಹವೂ ಇದೆ. ನನಗೆ ಈಜು ಕೂಡಾ ಗೊತ್ತಿಲ್ಲ. ಅದೆಲ್ಲವನ್ನೂ ಇಲ್ಲಿ ಕಲಿಸಿಕೊಡಲಿದ್ದಾರೆ. ಹಾಗಾಗಿ ಜಲ ಸಾಹಸ ಶಿಬಿರ ನನ್ನ ಪ್ರಥಮ ಅನುಭವ’’ ಎಂದು ಈಸ್ಟರ್ನ್ ರೈಲೇ ವಿಭಾಗದಿಂದ ಆಗಮಿಸಿರುವ, ಗುಜರಾತ್ ವಡೋದರ ನಿವಾಸಿ, ಅಲ್ಲಿನ ಎಂ.ಎಸ್. ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ತನ್ವೀರ್ ಅಭಿಪ್ರಾಯಿಸಿದ್ದಾರೆ.

ಸಮುದ್ರ ಸಾಹಸ ಹೊಸ ಅನುಭವ ನೀಡುವ ಕಾತರ

ಸಮುದ್ರದಲ್ಲಿ ಸಂಚರಿಸಿದ್ದೇನೆ. ಆದರೆ ಸಾಹಸ ಮಾಡಲಿರುವುದು ಇದೇ ಮೊದಲು. ಇದೊಂದು ಹೊಸ ಅನುಭವವಾಗುವ ಕಾತರ ನನ್ನದು’’ ಎನ್ನುತ್ತಾರೆ ಪಶ್ಚಿಮ ಬಂಗಾಲದ ಹೌರಾದ ಎನ್‌ಡಿ ಕಾಲೇಜು ವಿದ್ಯಾರ್ಥಿ ಪವನ್ ಶಿಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News