×
Ad

ದೇಶದಲ್ಲಿ ಗಂಭೀರ ಸ್ಥಿತಿ ನಿರ್ಮಾಣ: ಎಸ್.ಸುಧಾಕರ ರೆಡ್ಡಿ

Update: 2016-01-27 21:52 IST

ಮಂಗಳೂರು, ಜ.27: ದೇಶದಲ್ಲಿ ಅಸಹಿಷ್ಣುತೆಯ, ಬೆಲೆ ಏರಿಕೆ, ಹಣದುಬ್ಬರದ ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರಕಾರ ಇದನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರಕಾರ ಬೃಹತ್ ಉದ್ಯಮಿಗಳಿಗೆ ಮಾತ್ರ ಪೂರಕ ವ್ಯವಸ್ಥೆಯಾಗಿದೆ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದ್ದಾರೆ.


   ಅವರು ಇಂದು ನಗರದ ಬಿಜೈ ಕೆಬಿಇಎ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಪಕ್ಷದ ರಾಜ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯನ್ನು ದ್ದೇಶಿ ಮಾತನಾಡಿದರು.
       
    ಕಲ್ಭುರ್ಗಿ, ಪನ್ಸಾರೆ, ದಾಬೋಲ್ಕರ್‌ರಂತಹ ವ್ಯಕ್ತಿಗಳು ಅಸಹಿಷ್ಣುತೆಯ ಕಾರಣ ದಿಂದ ಕೊಲೆಯಾದರೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಕ್ಷದ ಮುಖ್ಯ ಹುದ್ದೆಯಲ್ಲಿರುವ ಪ್ರಧಾನ ಮಂತ್ರಿ ಈ ಬಗ್ಗೆ ವೌನವಹಿಸಿದ್ದಾರೆ. ಗಾಂಧಿಯನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಪ್ರತಿಮೆ ಸ್ಥಾಪಿಸಬೇಕು ಹೇಳಿದಾಗಲೂ ಅದನ್ನು ವಿರೋಧಿಸುವ ಹೇಳಿಕೆ ನೀಡಿಲ್ಲ. ಅಂಬೇಡ್ಕರ್‌ರನ್ನು ನಿಂದಿಸಿದಾಗಲೂ ಪ್ರಧಾನಿ ಯಾವುದೇ ಹೇಳಿಕೆ ನೀಡಿಲ್ಲ. ದೇಶದ ಸಂವಿಧಾನದಲ್ಲಿ ನೀಡಲಾದ ಹಕ್ಕುಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ ಮೂಲಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ದೇಶದ ಸಂಪತ್ತನ್ನು ಲೂಟಿ ಮಾಡಲು ಕೇಂದ್ರ ಸರಕಾರ ಅವಕಾಶ ನೀಡಿದಂತಾಗಿದೆ ಎಂದವರು ಆರೋಪಿಸಿದರು.
 ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಾ ಸಾಗಿದೆ ಪ್ರಸಕ್ತ ಒಂದು ಲೀಟರ್ ಪೆಟ್ರೋಲ್ 20 ರೂಪಾಯಿಗೆ ನೀಡಲು ಸಾಧ್ಯವಿದ್ದರೂ ಸರಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಾ ಹೋಗಿರುವುದರಿಂದ ಹಣದುಬ್ಬರದ ಪರಿಸ್ಥಿತಿ ಗಂಭೀರಗೊಳ್ಳಲು ಕಾರಣವಾಗಿದೆ.
ದೇಶದ ರಫ್ತು ವಹಿವಾಟು ಇಳಿಕೆಯಾಗಿದೆ. ನಿರುದ್ಯೋಗದ ಪ್ರಮಾಣವೂ ಹೆಚ್ಚಳವಾಗಿದೆ. ಸೇವಾಕ್ಷೇತ್ರ ಬಿಟ್ಟರೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಕುಂಠಿತವಾಗಿದೆ. ಜನಸಾಮಾನ್ಯರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದರು.


    ದೇಶದಲ್ಲಿ ಆಡಳಿತದಲ್ಲಿರುವ ಸರಕಾರ ನಾವು ಏನನ್ನು ತಿನ್ನಬೇಕು, ಏನು ಅಡುಗೆ ಮಾಡಬೇಕು ಎಂದು ನಿರ್ಬಂಧಿಸಲು ಹೊರಟಿದೆ. ಸಂವಿಧಾನದ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕೇಂದ್ರದಲ್ಲಿರುವ ಸರಕಾರದ ವರ್ಚಸ್ಸು ಕುಸಿದಿರುವುದು ಇತ್ತೀಚಿನ ಬಿಹಾರ, ಉ.ಪ್ರದೇಶ,ರಾಜಸ್ಥಾನ ಚುನಾವಣೆಗಳಲ್ಲಿ ಸಾಬೀತಾಗಿದೆ. ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 31ಸ್ಥಾನಗಳ ಪೈಕಿ 21 ಕಡೆ ಪರಾಭವ ಗೊಂಡಿದೆ. ಎಡಪಕ್ಷಗಳು ಹಾಗೂ ಸಮಾನ ಮನಸ್ಕ ಪಕ್ಷಗಳು ವಿರೋಧಿಸುತ್ತವೆ ಅದಕ್ಕಾಗಿ ಪರ್ಯಾಯವಾಗಿ ಸಂಘಟಿತರಾಗಿ ಹೋರಾಟ ತಂತ್ರವನ್ನು ರೂಪಿಸಲಿದೆ ಎಂದು ಸುಧಾಕರ ರೆಡ್ಡಿ ತಿಳಿಸಿದರು.
ಮರಳಿ ಹಳ್ಳಿಗಳ ಕಡೆಗೆ ದೇಶದಲ್ಲಿನ ಕಳೆದ 4 ದಶಕಗಳಲ್ಲಿ ಕಾಂಗ್ರೆಸ್ ಬಿಜೆಪಿ ನೇತೃತ್ವದ ಸರಕಾರದ ಆಡಳಿತವನ್ನು ಗಮನಿಸಿದಾಗಲೂ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ದೇಶದಲ್ಲಿ ಬೆಲೆ ಏರಿಕೆಯ ಗಂಭೀರ ಪರಿಸ್ಥಿತಿ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸಿಪಿಐ ವಿವಿಧ ಸಮಾನ ಮನಸ್ಕ ಸಂಘಟನೆಗಳ ಜೊತೆ ‘ಮರಳಿ ಹಳ್ಳಿಗಳ ಕಡೆಗೆ ’ಕಾರ್ಯಕ್ರಮವನ್ನು ಸಂಘಟಿಸಲಿದೆ. ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಥಳೀಯವಾಗಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ ಎಪ್ರಿಲ್ ತಿಂಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸುಧಾಕರ ರೆಡ್ಡಿ ತಿಳಿಸಿದ್ದಾರೆ.

 ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನ ಸಭಾ ಉಪ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ -ರಾಜ್ಯ ಸರಕಾರಗಳನ್ನು ವಿರೋಧಿಸಿ ಎಡಪಕ್ಷಗಳು, ಜಾತ್ಯತೀತ ನಿಲುವಿನ ಪಕ್ಷಗಳು ರೈತ ಸಂಘಟನೆಗಳೊಂದಿಗೆ ಪಕ್ಷ ಸಂಘಟಿತವಾಗಿ ಚುನಾವಣೆಯನ್ನು ಎದುರಿಸಲಿದೆ ಎಂದು ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿವಿ.ಲೋಕೇಶ್ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಸಿಪಿಐ ರಾಷ್ಟ್ರ ಮಂಡಳಿಯ ಸದಸ್ಯರಾದ ಡಾ.ಸಿದ್ದನ ಗೌಡ ಪಾಟೀಲ್,ರಾಜ್ಯಸಮಿತಿಯ ಜಂಟಿ ಕಾರ್ಯದರ್ಶಿ ಸ್ವಾತಿ ಸುಂದರೇಶ್,ದ.ಕ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ವಿ .ಕುಕ್ಯಾನ್,ಸೀತಾರಾಮ ಬೇರಿಂಜೆ,ಕರುಣಾಕರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News