ಉಡುಪಿ: ನಾಳೆಯಿಂದ ಫಲಫುಷ್ಪ ಪ್ರದರ್ಶನ
ಉಡುಪಿ, ಜ.27: ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಫಲಪುಷ್ಪಗಳ ಪ್ರದರ್ಶನವೊಂದು ಜ.29ರಿಂದ 31ರವರೆಗೆ ಇಲ್ಲಿನ ದೊಡ್ಡಣಗುಡ್ಡೆಯಲ್ಲಿರುವ ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ ಆವರಣದಲ್ಲಿ ನಡೆಯಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಕ ಕೆ.ಎ.ವಿಜಯಕುಮಾರ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಹಾಗೂ ನಗರವಾಸಿಗಳಿಗೆ ತೋಟಗಾರಿಕೆಯ ವಿವಿಧ ಆಯಾಮಗಳನ್ನು ತಿಳಿಹೇಳುವ ಪ್ರಯತ್ನವಾಗಿ ಈ ಫಲಫುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ಸುಮಾರು 5000 ಕುಂಡಗಳಲ್ಲಿ 10000ದಷ್ಟು ಹೂವಿನ ಗಿಡಗಳನ್ನು ಬೆಳೆಸಲಾಗಿದ್ದು, ವಿವಿಧ ಅಲಂಕಾರಿಕ ಗಿಡಗಳನ್ನು ಪ್ರದರ್ಶನ ಸಂದರ್ಭದಲ್ಲಿ ಜೋಡಣೆಗಾಗಿ ಸಿದ್ದಪಡಿಸಲಾಗಿದೆ. 32 ಜಾತಿಯ ವಿವಿಧ ವಾರ್ಷಿಕ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಇವುಗಳಲ್ಲಿ ಚೆಂಡು ಹೂವು, ಪೆಟೋನಿಯ,ಸ ವರ್ಬೆನಾ, ನಿತ್ಯಪುಷ್ಪ, ಕೋಲಿಯಸ್, ಇಂಪೇಶಿಯನ್ಸ್, ಅಲಂಕಾರಿಕ ಮೆಣಸಿನ ಗಿಡಳು ಗಾಂಪೊರಿನಾ, ಡೇಲಿಯಾ, ಸೂರ್ಯಕಾಂತಿ, ಅಲಂಕಾರಿಕ ಎಲೆಕೋಸಿನ ಗಿಡಗಳು ಸೇರಿವೆ ಎಂದರು.
ಪ್ರದರ್ಶನ ಸಂದರ್ಭದಲ್ಲಿ ವಿವಿಧ ಬಗೆಯ ಹೂವುಗಳಿಂದ ಮೀನು, ಬೋಟು, ಹೃದಯಾಕಾರದಲ್ಲಿ ಆಕರ್ಷಕ ಪುಷ್ಪ ಜೋಡಣೆ, ವಿವಿಧ ತರಕಾರಿಗಳ ತಾರಸಿ ತೋಟದ ಪ್ರಾತ್ಯಕ್ಷಿಕೆ, ತರಕಾರಿ ಕೆತ್ತನೆ, ಹೂವಿನ ರಂಗೋಲಿ ಪ್ರದರ್ಶನವಿದೆ. ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆ, ಪ್ರಗತಿಪರ ರೈತರು ಬೆಳೆದ ವಿವಿದ ತೋಟಗಾರಿಕಾ ಬೆಳೆಗಳ ಪ್ರದರ್ಶನ, ಆಧುನಿಕ ಕೃಷಿ ಯಂತ್ರೋಪಕರಣಗಳ ಮಳಿಗೆಗಳು ಇರಲಿವೆ ಎಂದು ಅವರು ಹೇಳಿದರು.
ಪ್ರದರ್ಶನವನ್ನು ಜ.29ರ ಸಂಜೆ 4:00 ಗಂಟೆಗೆ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಉದ್ಘಾಟಿಸುವರು. ಅಧ್ಯಕ್ಷತೆ ವಹಿಸುವ ಸಿಇಓ ಪ್ರಿಯಾಂಕ ಮೇರಿ ಫ್ರ್‌ಸಾ ಪುಷ್ಪ ಮಾದರಿಗಳನ್ನು ಉದ್ಘಾಟಿಸುವರು. ಮಳಿಗೆಗಳನ್ನು ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ ಉದ್ಘಾಟಿಸುವರು. ತೋಟಗಾರಿಕಾ ಇಲಾಖೆಯ ನಿರ್ದೇಶಕ ಎಸ್.ಬಿ.ಬೊಮ್ಮನಹಳ್ಳಿ, ಜಂಟಿ ನಿರ್ದೇಶಕ ಡಾ.ಜಗದೀಶ್ ಎಂ., ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಂತೋನಿ ಮರಿಯ ಇಮ್ಯಾನ್ಯುಯೆಲ್ ಭಾಗವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಸ್.ಸದಾಶಿವ ರಾವ್ ಉಪಸ್ಥಿತರಿದ್ದರು.