ಗ್ರೀಸ್: ದೋಣಿ ಮುಳುಗಿ 6 ವಲಸಿಗರು ಜಲಸಮಾಧಿ
ಅಥೆನ್ಸ್,ಜ.27: ತುರ್ಕಿಗೆ ಸಮೀಪ ಗ್ರೀಸ್ ದೇಶಕ್ಕೆ ಸೇರಿದ ದ್ವೀಪದ ಸಾಗರಪ್ರದೇಶದಲ್ಲಿ ದೋಣಿಯೊಂದು ಮುಳುಗಿ, ಮಗುವೊಂದು ಸೇರಿದಂತೆ ಆರು ಮಂದಿ ವಲಸಿಗರು ಜಲಸಮಾಧಿಯಾಗಿದ್ದಾರೆಂದು ಗ್ರೀಸ್‌ನ ತಟರಕ್ಷಣಾ ದಳವು ಬುಧವಾರ ತಿಳಿಸಿದೆ. ಕಠೋರವಾದ ಚಳಿಯ ನಡುವೆಯೂ ಅಂತರ್ಯುದ್ಧ ಪೀಡಿತ ಸಿರಿಯ ಮತ್ತಿತರ ದೇಶಗಳಿಂದ ಸಂತ್ರಸ್ತರು ಯುರೋಪ್‌ಗೆ ವಲಸೆ ಬರುತ್ತಿರುವುದು ಮುಂದುವರಿದಿರುವಂತೆಯೇ ಈ ದುರ್ಘಟನೆ ಸಂಭವಿಸಿದೆ.
ದೋಣಿಯಲ್ಲಿ 10 ಮಂದಿಯಿದ್ದರೆಂದು ಅಂದಾಜಿಸಲಾಗಿದ್ದು, ಅವರಲ್ಲಿ ಓರ್ವ ಈಜಿ ದಡ ಸೇರುವಲ್ಲಿ ಸಫಲನಾಗಿದ್ದಾನೆ. ಜಲಸಮಾಧಿಯಾದ ಬಾಲಕನೊಬ್ಬನ ಶವವು ಸಮುದ್ರದಡಕ್ಕೆ ತೇಲಿಬಂದಿದೆಯೆಂದು, ಗ್ರೀಸ್‌ನ ತಟರಕ್ಷಣಾ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತುರ್ಕಿಯ ಕರಾವಳಿಗೆ ಸಮೀಪದಲ್ಲಿರುವ ಪೂರ್ವ ಏಜಿಯನ್ ಸಾಗರಪ್ರದೇಶದ ಕೊಸ್ ದ್ವೀಪ ಸಮೀಪದ ಸಾಗರದಲ್ಲಿ ಬುಧವಾರ ಮುಂಜಾನೆ ದೋಣಿದುರಂತ ಸಂಭವಿಸಿದೆಯೆಂದು ಅವರು ಹೇಳಿದ್ದಾರೆ.ಗ್ರೀಕ್ ತಟರಕ್ಷಣಾ ದಳದ ಮೂರು ತಟರಕ್ಷಣಾ ನೌಕೆಗಳು, ಒಂದು ಮಿಲಿಟರಿ ಹೆಲಿಕಾಪ್ಟರ್ ಹಾಗೂ ಎರಡು ನೌಕೆಗಳು, ದುರಂತದಲ್ಲಿ ಬದುಕುಳಿದಿರುವವರ ಶೋಧಕಾರ್ಯದಲ್ಲಿ ತೊಡಗಿವೆ.
ಕಳೆದ ವರ್ಷ ಸಿರಿಯ,ಅಫ್ಘಾನಿಸ್ತಾನ ಸೇರಿದಂತೆ ಯುದ್ಧಪೀಡಿತ ದೇಶಗಳಿಂದ 6 ಲಕ್ಷಕ್ಕೂ ಅಧಿಕ ನಿರಾಶ್ರಿತರು ತುರ್ಕಿಯಿಂದ ಗ್ರೀಸ್‌ಗೆ ವಲಸೆ ಬಂದಿದ್ದಾರೆ. ಕಳೆದ ವಾರ ತುರ್ಕಿ ಸಮೀಪದ ಕರಾವಳಿಯಲ್ಲಿ ನಿರಾಶ್ರಿತರಿದ್ದ ದೋಣಿಯೊಂದು ಮುಳುಗಿ 17 ಮಕ್ಕಳು ಸೇರಿದಂತೆ 43 ಮಂದಿ ಸಮುದ್ರಪಾಲಾಗಿದ್ದರು.