ಕನಿಷ್ಕ ಬಾಂಬ್ ಸ್ಫೋಟದ ಅಪರಾಧಿ ಶೀಘ್ರವೇ ಬಿಡುಗಡೆ
ಟೊರಾಂಟೊ,ಜ.27: 1985ರ ಏರ್‌ಇಂಡಿಯಾ ಕನಿಷ್ಕ ವಿಮಾನದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಏಕೈಕ ಅಪರಾಧಿ ಇಂದರ್‌ಜಿತ್ ಸಿಂಗ್ ರಿಯಾತ್, ಶೀಘ್ರದಲ್ಲಿಯೇ ಕೆನಡಾದ ಬ್ರಿಟಿಶ್ ಕೊಲಂಬಿಯಾದ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾನೆ.
1985ರ ಜೂನ್ 23ರಂದು ಕೆನಡದ ಮಾಂಟ್ರಿಯಲ್‌ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಏರ್‌ಇಂಡಿಯಾದ ಕನಿಷ್ಕ 182 ವಿಮಾನವು ಗಗನದಲ್ಲಿ ಸ್ಫೋಟಿಸಿ, ಎಲ್ಲಾ 329 ಪ್ರಯಾಣಿಕರು ಹಾಗೂ ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ಒಂದು ಗಂಟೆಯೊಳಗೆ ಟೊಕಿಯೊದಿಂದ ಮುಂಬೈಗೆ ತೆರಳುತ್ತಿದ್ದ ವಿಮಾನವನ್ನು ಸ್ಫೋಟಿಸಲೆಂದು ಲಗ್ಗೇಜೊಂದರಲ್ಲಿ ಇರಿಸಲಾಗಿದ್ದ ಬಾಂಬೊಂದು ಟೊಕಿಯೊ ವಿಮಾನನಿಲ್ದಾಣದಲ್ಲಿಯೇ ಸ್ಫೋಟಿಸಿ ಇಬ್ಬರು ಸಾವನ್ನಪ್ಪಿದ್ದರು.
ಟೊಕಿಯೊ ವಿಮಾನ ನಿಲ್ದಾಣದಲ್ಲಿ ಸ್ಫೋಟಗೊಂಡ ಬಾಂಬನ್ನು ಜೋಡಿಸಲು ಇಂದರ್‌ಜಿತ್‌ಸಿಂಗ್ ನೆರವಾದ ಆರೋಪದಲ್ಲಿ ಆತನಿಗೆ 1991ರಲ್ಲಿ ಕೆನಡದ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆಬಳಿಕ ಏರ್‌ಇಂಡಿಯಾ ಕನಿಷ್ಕ ಬಾಂಬ್ ಸ್ಪೋಟ ಪ್ರಕರಣದಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಆತನಿಗೆ ಇನ್ನೂ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ರಿಪುದಮನ್ ಸಿಂಗ್ ಹಾಗೂ ಅಜೈಬ್‌ಸಿಂಗ್ ಬಾಗ್ರಿ ಅವರನ್ನು 2005ರಲ್ಲಿ ಕೆನಡದ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಕೆನಡಾದ ವಾಂಕೂವರ್‌ನ ಖಲಿಸ್ತಾನಿ ಉಗ್ರರು ಈ ಎರಡು ಬಾಂಬ್ ಸ್ಫೋಟಗಳ ಸಂಚಿನ ರೂವಾರಿಗಳಾಗಿದ್ದರು. 1984ರಲ್ಲಿ ಖಲಿಸ್ತಾನಿ ಉಗ್ರರನ್ನು ಅಮೃತಸರದ ಸುವರ್ಣಮಂದಿರದಿಂದ ಹೊರದಬ್ಬಲು ಭಾರತ ಸರಕಾರ ನಡೆಸಿದ ಸೇನಾಕಾರ್ಯಾಚರಣೆಗೆ ಪ್ರತೀಕಾರವಾಗಿ ತಾವು ಈ ಸ್ಫೋಟಗಳನ್ನು ನಡೆಸಿರುವುದಾಗಿ ಅವರು ಹೇಳಿಕೊಂಡಿದ್ದರು.