ಝೈಕಾ ವೈರಸ್ ವಿರುದ್ಧ ಸಮರ: ಒಬಾಮ ಕರೆ
ವಾಶಿಂಗ್ಟನ್,ಜ.27: ವಿಶ್ವದಾದ್ಯಂತ ಭೀತಿಯನ್ನು ಸೃಷ್ಟಿಸಿರುವ ‘ ಝೈಕಾ ವೈರಸ್‌ನ ಮೂಲೋತ್ಪಾಟನೆಗೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿಶ್ವಸಮುದಾಯಕ್ಕೆ ಕರೆ ನೀಡಿದ್ದಾರೆ. ಝೈಕಾ ವೈರಸ್‌ನ ಹರಡುವಿಕೆಯನ್ನು ತಡೆಗಟ್ಟುವ ಲಸಿಕೆಗಳು ಹಾಗೂ ಔಷಧಿಗಳ ಸಂಶೋಧನೆಯನ್ನು ತ್ವರಿತಗೊಳಿಸುವಂತೆ ಒಬಾಮಾ ವೈದ್ಯ ವಿಜ್ಞಾನಿಗಳಿಗೆ ತಿಳಿಸಿದ್ದಾರೆ.
ಝೈಕಾ ವೈರಸ್ ಸೋಂಕು ತಗಲಿದ ಮಹಿಳೆಯರಿಗೆ ಹುಟ್ಟುವ ಶಿಶುಗಳ ಮೆದುಳು ಬೆಳವಣಿಗೆ ಕುಂಠಿತವಾಗಿರುತ್ತದೆಯೆಂದು ವಿಜ್ಞಾನಿಗಳು ಬಹಿರಂಗಪಡಿಸಿರುವುದು,ಭಾರೀ ಆತಂಕಕ್ಕೆ ಕಾರಣವಾಗಿದೆ.ಝೈಕಾ ವೈರಸ್ ಮುಂದಿನ ಕೆಲವು ತಿಂಗಳುಗಳೊಳಗೆ ದಕ್ಷಿಣ ಹಾಗೂ ಉತ್ತರ ಅಮೆರಿಕಗಳಿಗೆ ಹರಡುವ ಅಪಾಯವಿದೆಯೆಂದು ವಿಶ್ವ ಆರೋಗ್ಯಸಂಸ್ಥೆಯು ಎಚ್ಚರಿಕೆ ನೀಡಿದೆ.
ಕೆರಿಬಿಯನ್ ಸಮುದ್ರ ಪ್ರದೇಶ, ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡದಲ್ಲಿರುವ ಒಟ್ಟು 21 ರಾಷ್ಟ್ರಗಳಲ್ಲಿ ಝೈಕಾ ರೋಗಾಣುಗಳು ಈಗಾಗಲೇ ಪತ್ತೆಯಾಗಿವೆ. ತಿಳಿಜ್ವರ,ಕಣ್ಣುರಿ ಹಾಗೂ ತಲೆನೋವು ಈ ರೋಗದ ಆರಂಭಿಕ ಲಕ್ಷಣಗಳಾಗಿವೆ. ಈ ವೈರಸ್ ಗರ್ಭದಲ್ಲಿರುವ ಶಿಶುಗಳ ಬೆಳವಣಿಗೆಗೆ ಹಾನಿಯನ್ನುಂಟು ಮಾಡುತ್ತವೆಯೆಂದು ವೈದ್ಯವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಝೈಕಾ ವೈರಸ್ ಪತ್ತೆಯಾಗಿರುವ ಬ್ರೆಝಿಲ್‌ನಲ್ಲಿ, ಅಸಹಜವಾದ ಸಣ್ಣ ತಲೆಯಿರುವ ಶಿಶುಗಳ (ಮೈಕ್ರೊಸೆಫಲಿ)ಜನನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ಮಧ್ಯ ಹಾಗೂ ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಮಹಿಳೆಯರು ಗರ್ಭಧಾರಣೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಅಲ್ಲಿನ ಸರಕಾರಗಳು ಕರೆ ನೀಡಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದೀಚೆಗೆ ಬ್ರೆಝಿಲ್‌ನಲ್ಲಿ ಮೈಕ್ರೊಸೆಫಲಿ ರೋಗಪೀಡಿತ 3893 ಶಿಶುಗಳು ಜನಿಸಿದ್ದರೆ, ಅದಕ್ಕೂ ಮುನ್ನ ವಾರ್ಷಿಕವಾಗಿ ಈ ರೋಗದ ಸರಾಸರಿ 160 ಪ್ರಕರಣಗಳಷ್ಟೇ ವರದಿಯಾಗಿದ್ದವು.
ಝೈಕಾ ವೈರಸ್ ಏನಿದು?
ಝೈಕಾ ವೈಸ್, ‘ಇಡ್ಸ್ ಏಜಿಪ್ಟಿ’ ಎಂಬ ಪ್ರಭೇದದ ಸೊಳ್ಳೆಯ ಮೂಲಕ ಹರಡುತ್ತದೆ. ಈ ಸೊಳ್ಳೆಯು ಡೆಂಗ್ ಜ್ವರ ಹಾಗೂ ಹಳದಿ ಜ್ವರವನ್ನು ಕೂಡಾ ಹರಡುತ್ತದೆ. 1940ರಲ್ಲಿ ಮೊದಲ ಬಾರಿಗೆ ಝೈಕಾ ವೈರಸ ಪತ್ತೆಯಾಗಿತ್ತು. ಝೈಕಾ ವೈರಸ್ ಶಿಶುಗಳ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆಯೆಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಡೆನ್ಮಾರ್ಕ್ ಪ್ರವಾಸಿಗನಿಗೂ ಝೈಕಾ
ಲ್ಯಾಟಿನ್ ಅಮೆರಿಕದಿಂದ ಸ್ವದೇಶಕ್ಕೆ ವಾಪಸಾಗಿರುವ ಡೆನ್ಮಾರ್ಕ್‌ನ ಪ್ರವಾಸಿಗನೊಬ್ಬನಲ್ಲೂ ಝೈಕಾ ವೈರಸ್ ಪತ್ತೆಯಾಗಿದೆ. ಇದಕ್ಕೂ ಮುನ್ನ ಜರ್ಮನಿ, ಬ್ರಿಟನ್ ಹಾಗೂ ಸ್ವೀಡನ್‌ಗಳಲ್ಲಿಯೂ ಝೈಕಾ ರೋಗ ಪ್ರಕರಣಗಳು ವರದಿಯಾಗಿದ್ದವು.