45 ಭಾರತೀಯ ಬೆಸ್ತರ ಬಂಧನ
Update: 2016-01-27 23:21 IST
ಕರಾಚಿ, ಜ.27: ಸಿಂಧ್ ಪ್ರಾಂತದ ಅರೇಬಿಯಾ ಸಾಗರ ಪ್ರದೇಶದಲ್ಲಿ ಪಾಕ್ ಜಲಸೀಮೆಯನ್ನು ಪ್ರವೇಶಿಸಿದ 45 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ನೌಕಾಪಡೆಯು ಮಂಗಳವಾರ ಬಂಧಿಸಿದೆ. ಬಂಧಿತ ಮೀನುಗಾರರನ್ನು ಕರಾಚಿಯ ಬಂದರು ಪೊಲೀಸ್ ಠಾಣೆಯಲ್ಲಿರಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಬಂಧಿತರ ವಿರುದ್ಧ ವಿದೇಶಿಗರ ಕಾಯ್ದೆ ಹಾಗೂ ಪಾಕಿಸ್ತಾನ ಮೀನುಗಾರಿಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆಯೆಂದು ಪಾಕ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಭಾರತದ ಮಧ್ಯೆ ಇರುವ ಸಾಗರಪ್ರದೇಶದ ಗಡಿಯನ್ನು ಸರಿಯಾಗಿ ಗುರುತಿಸಿರದ ಕಾರಣ ಎರಡೂ ದೇಶಗಳ ಮೀನುಗಾರರು ಮೀನುಗಾರಿಕೆಯ ವೇಳೆ ಪ್ರಮಾದವಶಾತ್ ಇನ್ನೊಂದು ದೇಶದ ಸಮುದ್ರಪ್ರದೇಶವನ್ನು ಪ್ರವೇಶಿಸಿ, ಬಂಧನಕ್ಕೊಳಗಾಗುವುದು ಸಾಮಾನ್ಯವಾಗಿ ಬಿಟ್ಟಿದೆ.