25 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಸೋಲಾರ್ ಅಳವಡಿಕೆ
ಮಂಗಳೂರು, ಜ.28: ದ.ಕ. ಜಿಲ್ಲೆಯಲ್ಲಿ ಸೌರ ವಿದ್ಯುತ್‌ಗೆ ಒತ್ತು ನೀಡುವ ನಿಟ್ಟಿನಲ್ಲಿ ಸರಕಾರ ಕಟ್ಟಡಗಳಲ್ಲಿ ಸೌರ ವಿದ್ಯುತ್ ಬಳಕೆಯ ಪ್ರಥಮ ಯತ್ನವಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ 25 ಕೆವಿ. ಸಾಮರ್ಥ್ಯದ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಕೆ ಮಾಡಲಾಗಿದೆ.
ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ಈ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದ್ದು, ಕಳೆದ ಎರಡೂವರೆ ದಿನಗಳಲ್ಲಿ ಒಟ್ಟು 64 ಯುನಿಟ್ ಸೋಲಾರ್ ಶಕ್ತಿ (ವಿದ್ಯುತ್) ಉತ್ಪಾದನೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
15 ಕೆವಿ ಹಾಗೂ 10 ಕೆವಿ ಸಾಮರ್ಥ್ಯದ ಎರಡು ಸೋಲಾರ್ ಘಟಕಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಳವಡಿಸಲಾಗಿದ್ದು, ಕಚೇರಿಯ ಮೇಲ್ಛಾವಣಿಯಲ್ಲಿ 100 ಸೌರಶಕ್ತಿ ಪ್ಯಾನೆಲ್‌ಗಳನ್ನು ಹಾಕಲಾಗಿದೆ. 15 ಕೆವಿಯಿಂದ ತಿಂಗಳಿಗೆ 155 ಯುನಿಟ್ ಹಾಗೂ 10 ಕೆವಿಯಿಂದ ತಿಂಗಳಿಗೆ 94 ಯುನಿಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆಯಾದರೂ ಕೇವಲ ಎರಡೂವರೆ ದಿನಗಳಲ್ಲಿಯೇ ಒಟ್ಟಚು 64 ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಹಾಗಾಗಿ ತಿಂಗಳೊಂದಕ್ಕೆ ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ವಿದ್ಯುತ್ ಉತ್ಪಾದನೆಯಾಗುವ ಗುರಿ ಇದೆ. ದ.ಕ. ಜಿಲ್ಲೆಯಲ್ಲಿ ಸರಕಾರಿ ಕಟ್ಟಡದಲ್ಲಿ ಸೋಲಾರ್ ವಿದ್ಯುತ್ ಪ್ರಯತ್ನ ಜಿಲ್ಲಾಧಿಕಾರಿ ಕಚೇರಿಯಿಂದಲೇ ಆರಂಭಗೊಂಡಿದೆ ಎಂದು ಅವರು ಹೇಳಿದರು.