×
Ad

ಕಾರ್ಕಳ : ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವಕ್ಕೆ ತೆರೆ

Update: 2016-01-28 21:45 IST

ಕಾರ್ಕಳ, ಜ.28: ಐದು ದಿನಗಳ ಕಾಲ ಅದ್ದೂರಿಯಾಗಿ ನಡೆದ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವವು ಗುರುವಾರ ರಾತ್ರಿಯ ಕೊನೆಯ ಬಲಿಪೂಜೆಯೊಂದಿಗೆ ಸಮಾಪನಗೊಂಡಿತು.

ಮಾರ್ಗದರ್ಶಿ ಮಾತೆಯ ಹಬ್ಬದ ಪವಿತ್ರ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೊ ನೆರ ವೇರಿಸಿ ಸಂದೇಶ ನೀಡಿದರು. ಸಮಾಜದಲ್ಲಿ ನೊಂದವರ, ಹಲ್ಲೆಗೊಳಗಾದವರ, ಅತ್ಯಾಚಾರದಂತಹ ಭೀಕರ ಸಮಸ್ಯೆಗಳಿಂದ ನೊಂದವರ ಜೀವನದಲ್ಲಿ ನಾವು ಕರುಣೆ ಹಾಗೂ ದಯೆಯನ್ನು ತೋರಿ ಅವರಲ್ಲಿ ನಾವು ದೇವರನ್ನು ಕಾಣುವ ಉತ್ತಮ ಕೆಲಸಕ್ಕೆ ಅಣಿಯಾಗಬೇಕು ಎಂದರು.

ಪವಿತ್ರ ಧರ್ಮಸಭೆಯಲ್ಲಿ ದಯೆಗೆ ಮಹತ್ವ ನೀಡುವ ಉದ್ದೇಶದಿಂದ ಪ್ರಸ್ತುತ ವರ್ಷವನ್ನು ದಯೆಯ ವರ್ಷವಾಗಿ ಪೋಪ್ ಜಗದ್ಗುರುಗಳು ಘೋಷಿಸಿದ್ದು ಅದರಂತೆ ಪ್ರತಿಯೊಬ್ಬರಲ್ಲಿ ದಯಾಗುಣವನ್ನು ಕಾಣಬೇಕು. ಕ್ರೈಸ್ತ ಸಮುದಾಯ ಈಗಾಗಲೇ ದಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಅದು ಮುಂದುವರಿ ಯುವಂತಾಗಬೇಕು. ದಯಾಗುಣ ನಮ್ಮಲ್ಲಿನ ನ್ಯೂನ್ಯತೆಗಳನ್ನು ಹೊರಹಾಕಿ ಹೊಸ ಮನುಷ್ಯರನ್ನಾಗಿ ಬಾಳಲು ಅವಕಾಶ ನೀಡುತ್ತದೆ. ದಯೆ ಹಾಗೂ ಕರುಣೆಯ ಫಲವಾಗಿ ಮನುಷ್ಯ ಹಾಗೂ ದೇವರ ನಡುವೆ ಹೊಸ ಸಂಬಂಧ ವನ್ನು ಹುಟ್ಟು ಹಾಕಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಪುಣ್ಯಕ್ಷೇತ್ರದ ನಿರ್ದೇಶಕ ವಂ.ಜಾರ್ಜ್ ಡಿಸೋಜ, ಸಹಾಯಕ ಧರ್ಮಗುರು ಗಳಾದ ವಂ.ಅಲ್ಫೋನ್ಸ್ ಡಿಲೀಮಾ, ವಂ.ವಿಜಯ್ ಡಿಸೋಜ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ.ಜೋಸ್ವಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಐದು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ವಾರಾಣಾಸಿ, ಬೆಳ್ತಂಗಡಿ, ಬಳ್ಳಾರಿ, ಮಂಗಳೂರು ಹಾಗೂ ಉಡುಪಿಯ ಧರ್ಮಾಧ್ಯಕ್ಷರುಗಳು ಸೇರಿ ಐದು ಮಂದಿ ಭಾಗವಹಿಸಿ ಬಲಿಪೂಜೆಯನ್ನು ಅರ್ಪಿಸಿದರು. 48 ಬಲಿಪೂಜೆಗಳು ಕನ್ನಡ ಕೊಂಕಣಿ, ಆಂಗ್ಲ ಹಾಗೂ ಮಲಯಾಳಂ ಭಾಷೆಗಳಲ್ಲಿ ನಡೆದಿದ್ದು ಲಕ್ಷಾಂತರ ಭಕ್ತರು ಪೂಜಾ ವಿಧಿಗಳಲ್ಲಿ ಭಾಗವಹಿಸಿ ತಮ್ಮ ಹರಕೆಗಳನ್ನು ಸಂತ ಲಾರೆನ್ಸರಿಗೆ ಸಮರ್ಪಿಸಿದರು.

ಕ್ಷೇತ್ರದಲ್ಲಿ ಭಿಕ್ಷಾಟನೆಯನ್ನು ಐದು ದಿನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಕ್ತರು ಭಿಕ್ಷುಕರಿಗೆ ನೀಡುವ ದಾನವನ್ನು ದೇವಾಲಯದ ಎರಡು ಸ್ಥಳಗಳಲ್ಲಿ ಇಟ್ಟಿರುವ ಬೃಹತ್ ಗಾತ್ರದ ಡಬ್ಬಿಗಳಿಗೆ ಹಾಕಲು ಅವಕಾಶ ಕಲ್ಪಿಸಲಾಗಿದೆ. ಭಕ್ತರು ಭಿಕ್ಷುಕರಿಗಾಗಿ ಹಾಕಿದ ದಾನವನ್ನು ಜ.29ರಂದು ಮಧ್ಯಾಹ್ನ ಭೋಜನ ದೊಂದಿಗೆ ವಿತರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News