×
Ad

ಸೇನಾಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಕೋರಿಕೆ

Update: 2016-01-28 22:09 IST

ಹೊಸದಿಲ್ಲಿ: ಅಕ್ರಮ ಸಂಪತ್ತು ಹೊಂದಿರುವ ಆರೋಪಗಳನ್ನು ಎದುರಿಸುತ್ತಿರುವ ಇಬ್ಬರು ಹಾಲಿ ಲೆಫ್ಟಿನೆಂಟ್ ಜನರಲ್‌ಗಳ ವಿರುದ್ಧ ತನಿಖೆಯನ್ನು ನಡೆಸುವಂತೆ ರಕ್ಷಣಾ ಸಚಿವಾಲಯವು ಸಿಬಿಐಯನ್ನು ಕೇಳಿಕೊಂಡಿದೆ ಎಂದು ಸರಕಾರದ ಮೂಲಗಳು ಗುರುವಾರ ತಿಳಿಸಿದವು.
ಈ ವಿಷಯದಲ್ಲಿ ಪ್ರಾಥಮಿಕ ತನಿಖೆಗೆ ಸಿಬಿಐ ಇನ್ನೂ ಆದೇಶಿಸಿಲ್ಲ.
 ಕಳೆದ ವರ್ಷ ಮೇಜರ್ ಜನರಲ್‌ಗಳಿಗೆ ಲೆಫ್ಟಿನೆಂಟ್ ಜನರಲ್‌ಗಳಾಗಿ ಬಡ್ತಿ ಸಂಬಂಧಿತ ವಿಷಯದಲ್ಲಿ ಭ್ರಷ್ಟಾಚಾರದ ಆರೋಪಗಳ ನಡುವೆ ಈ ಇಬ್ಬರ ಪೈಕಿ ಓರ್ವ ಸೇನಾಧಿಕಾರಿಯ ಹೆಸರು ಕೇಳಿಬಂದಿತ್ತು. ಆಗ ಈ ಅಧಿಕಾರಿ ಕೋಲ್ಕತಾದಲ್ಲಿ ಸೇವೆಯಲ್ಲಿದ್ದರು. ಅವ್ಯವಹಾರಗಳ ಆರೋಪಗಳ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯವು ಕೆಲವು ಅಧಿಕಾರಿಗಳ ಬಡ್ತಿಯನ್ನು ತಡೆಹಿಡಿದಿತ್ತು.
ಬಡ್ತಿ ಸಂಬಂಧಿತ ವಿಷಯದಲ್ಲಿ ಆಗ ಸೇವೆಯಲ್ಲಿದ್ದು,ಹಾಲಿ ನಿವೃತ್ತರಾಗಿರುವ ಲೆಫ್ಟಿನೆಂಟ್ ಜನರಲ್ ಓರ್ವರ ಪಾತ್ರದ ಕುರಿತು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರೀ ವದಂತಿಗಳು ಕೇಳಿ ಬಂದಿದ್ದವು. ಆದರೆ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ವದಂತಿಗಳನ್ನು ರಕ್ಷಣಾ ಸಚಿವಾಲಯವು ತಳ್ಳಿಹಾಕಿತ್ತು.
ಸಿಬಿಐಗೆ ಒಪ್ಪಿಸಲಾಗಿರುವ ಇನ್ನೊಂದು ಪ್ರಕರಣದಲ್ಲಿ ಆರೋಪಿಯಾಗಿರುವ ಅಧಿಕಾರಿ ಸೇನೆಯ ಕೇಂದ್ರ ಕಚೇರಿಯಲ್ಲಿ ನಿಯೋಜಿತರಾಗಿದ್ದಾರೆ. ಸಿಬಿಐಗೆ ಒಪ್ಪಿಸುವ ಮುನ್ನ ರಕ್ಷಣಾ ಸಚಿವ ಮನೋಹರ ಪಾರ್ರಿಕರ್ ಅವರೇ ಖುದ್ದು ಈ ವಿಷಯವನ್ನು ಪರಿಶೀಲಿಸಿದ್ದರೆನ್ನಲಾಗಿದೆ.
ವಿಶೇಷ ಬಡ್ತಿ ಮಂಡಳಿಯೊಂದು ಕಳೆದ ವರ್ಷ ಲೆಫ್ಟಿನೆಂಟ್ ಜನರಲ್ ದರ್ಜೆಯ ಮೂರು ಖಾಲಿ ಹುದ್ದೆಗಳಿಗೆ 33 ಮೇಜರ್ ಜನರಲ್‌ಗಳ ಹೆಸರುಗಳನ್ನು ಪರಿಗಣಿಸಿತ್ತು ಮತ್ತು ಅವುಗಳ ಪೈಕಿ ಕೆಲವು ಹೆಸರುಗಳಿಗೆ ಹಸಿರು ನಿಶಾನೆ ತೋರಿಸಿ ಅವುಗಳನ್ನು ಸಚಿವಾಲಯಕ್ಕೆ ರವಾನಿಸಿತ್ತು. ಆದರೆ ಕೆಲವು ಅಧಿಕಾರಗಳ ವಿರುದ್ಧ ದೂರುಗಳ ಸರಮಾಲೆಯೇ ಕೇಳಿ ಬಂದ ನಂತರ ಪಾರ್ರಿಕರ್ ಅವರು ಈ ವಿಷಯವನ್ನು ಪರಿಶೀಲಿಸಿದ್ದರು ಎಂದು ಮೂಲಗಳು ತಿಳಿಸಿದವು.
ಈಗ ಸಿಬಿಐಗೆ ಒಪ್ಪಿಸಲಾಗಿರುವ ಪ್ರಕರಣಗಳಲ್ಲಿಯ ಇಬ್ಬರು ಅಧಿಕಾರಿಗಳ ಪೈಕಿ ಓರ್ವರು ಕೆಲವು ವರ್ಷಗಳ ಹಿಂದೆ ಗಡಿ ರಸ್ತೆಗಳ ಸಂಸ್ಥೆಯು ಕೈಗೊಂಡಿದ್ದ ಯೋಜನೆಯೊಂದರಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ತನಿಖೆಯನ್ನು ಎದುರಿಸಿದ್ದರು ಎಂದು ಸುದ್ದಿಸಂಸ್ಥೆಯು ಗುರುವಾರ ವರದಿ ಮಾಡಿದೆ. ಆದರೆ ಅವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲು ಸಿಬಿಐಗೆ ಸಾಕಷ್ಟು ಸಾಕ್ಷಾಧಾರಗಳು ಲಭಿಸಿರಲಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News