ಕೊಹ್ಲಿ ಅಭಿಮಾನಿ ಮೇಲೆ 10 ವರ್ಷ ಜೈಲಿನ ತೂಗುಗತ್ತಿ: ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಆರೋಪ
ಲಾಹೋರ್, ಜ. 28: ತನ್ನ ಮನೆಯ ಮೇಲೆ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಗೆ ಇಲ್ಲಿನ ನ್ಯಾಯಾಲಯವೊಂದು ನ್ಯಾಯಾಂಗ ಬಂಧನ ವಿಧಿಸಿದೆ.
ಪಾಕಿಸ್ತಾನದ ಪಂಜಾಬ್ ರಾಜ್ಯದ ಒಕಾರ ಜಿಲ್ಲೆಯ ನಿವಾಸಿ 22 ವರ್ಷದ ಉಮರ್ ಡ್ರಾಝ್‌ರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅಪರಾಧ ಸಾಬೀತಾದರೆ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ಕ್ರಿಕೆಟಿಗನ ಮೇಲಿನ ತನ್ನ ಪ್ರೀತಿಯನ್ನು ತೋರಿಸುವುದಕ್ಕಾಗಿ ವೃತ್ತಿಯಲ್ಲಿ ದರ್ಜಿಯಾಗಿರುವ ಉಮರ್ ಭಾರತೀಯ ಧ್ವಜವನ್ನು ತನ್ನ ಮನೆಯಲ್ಲಿ ಹಾರಿಸಿದ್ದರು. ಅವರನ್ನು ಬುಧವಾರ ಜಿಲ್ಲಾ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತು.
ಜನವರಿ 26ರಂದು ನಡೆದ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯವನ್ನು ಸೋಲಿಸಿತ್ತು ಹಾಗೂ ಆ ಪಂದ್ಯದಲ್ಲಿ ಕೊಹ್ಲಿ 90 ರನ್‌ಗಳನ್ನು ಗಳಿಸಿದ್ದರು. ಅದೇ ದಿನ ಉಮರ್‌ರನ್ನು ಪೊಲೀಸರು ಬಂಧಿಸಿದರು.
ಉಮರ್ ತನ್ನ ಮನೆಯ ಮಾಡಿನಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆ ದಿನ ಉಮರ್ ಮನೆಗೆ ದಾಳಿ ನಡೆಸಿದರು.
ಪಾಕಿಸ್ತಾನ ದಂಡ ಸಂಹಿತೆಯ 123-ಎ ಪರಿಚ್ಛೇದ ಮತ್ತು ಸಾರ್ವಜನಿಕ ಶಾಂತಿ ನಿರ್ವಹಣೆ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ದೇಶದ ಸಾರ್ವಭೌಮತ್ವಕ್ಕೆ ಹಾನಿ ತರುವ ಚಟುವಟಿಕೆಗಳಿಗೆ ಸಂಬಂಧಿಸಿದ 123-ಎ ಪರಿಚ್ಛೇದದ ಅನ್ವಯ, ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಕೊಹ್ಲಿ ಮೇಲಿನ ಅಭಿಮಾನಕ್ಕಾಗಿ ಮಾತ್ರ ತಾನು ಭಾರತೀಯ ಧ್ವಜವನ್ನು ಹಾರಿಸಿದೆ ಎಂಬುದಾಗಿ ಉಮರ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಹೆಚ್ಚಿನ ತನಿಖೆಗಾಗಿ ಆತನನ್ನು ತಮ್ಮ ಕಸ್ಟಡಿಗೆ ಒಪ್ಪಿಸಬೇಕೆಂದು ಪೊಲೀಸರು ಕೋರಿದರಾದರೂ, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ನಾನು ಕೊಹ್ಲಿಯ ಅಭಿಮಾನಿ ಮಾತ್ರ; ಕ್ಷಮಿಸಿ
ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಉಮರ್, ‘‘ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಕೊಹ್ಲಿಗಾಗಿ ನಾನು ಭಾರತ ತಂಡವನ್ನು ಬೆಂಬಲಿಸುತ್ತೇನೆ. ನನ್ನ ಮನೆಯ ತುದಿಯಲ್ಲಿ ಭಾರತದ ಧ್ವಜವನ್ನು ಹಾರಿಸಿರುವುದು ಕೊಹ್ಲಿಯ ಕುರಿತಾದ ನನ್ನ ಅಭಿಮಾನವನ್ನು ಮಾತ್ರ ತೋರಿಸುತ್ತದೆ’’ ಎಂದು ಹೇಳಿದರು.
ತಾನು ಅಪರಾಧ ಮಾಡುತ್ತಿದ್ದೇನೆಂಬ ಅರಿವು ತನಗಿರಲಿಲ್ಲ ಎಂದು ಹೇಳಿದ ಅವರು, ತನ್ನನ್ನು ಭಾರತೀಯ ಕ್ರಿಕೆಟಿಗನ ಅಭಿಮಾನಿ ಎಂಬುದಾಗಿ ಪರಿಗಣಿಸಿ ತನಗೆ ಕ್ಷಮೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರು.
ಕೊಹ್ಲಿಯ ಬೃಹತ್ ಗಾತ್ರದ ಚಿತ್ರಗಳು ಅವರ ಮನೆಯ ಗೋಡೆಗಳಲ್ಲಿ ಪತ್ತೆಯಾಗಿವೆ. ಭಾರತ ಧ್ವಜ ಹಾಗೂ ಕೊಹ್ಲಿಯ ಪೋಸ್ಟರ್‌ಗಳು ಮತ್ತು ಚಿತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.