×
Ad

ವಿವಾದಿತ ಬಾಬರಿ ಮಸೀದಿ ಕಟ್ಟಡತೆರೆದಿಟ್ಟದ್ದು ರಾಜೀವ್ ತಪ್ಪು ನಿರ್ಧಾರ: ಪ್ರಣವ್ ಮುಖರ್ಜಿ ಅನಿಸಿಕೆ

Update: 2016-01-28 23:47 IST

 ಹೊಸದಿಲ್ಲಿ, ಜ.28: ಅಯೋಧ್ಯೆಯ ವಿವಾದಿತ ಕಟ್ಟಡವನ್ನು ಮುಕ್ತಗೊಳಿಸಿದುದು, ಆಗಿನ ಪ್ರಧಾನಿ ರಾಜೀವ್‌ಗಾಂಧಿ ‘ತಪ್ಪು ತೀರ್ಮಾನ’ ತೆಗೆದುಕೊಂಡಿದ್ದರೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗುರುವಾರ ಬಿಡುಗಡೆಗೊಳಿಸಿದ ತನ್ನ ಆತ್ಮಕಥೆಯಲ್ಲಿ ಬಣ್ಣಿಸಿದ್ದಾರೆ.

 
ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಬಾಬರಿ ಮಸೀದಿಯ ಧ್ವಂಸದ ಘಟನೆಯು ಭಾರತದ ವರ್ಚಸ್ಸನ್ನು ನಾಶಪಡಿಸಿದಂತಹ ‘ಸಂಪೂರ್ಣ ನಂಬಿಕೆದ್ರೋಹ’ದ ಕೃತ್ಯವಾಗಿದೆಯೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತನ್ನ ‘‘ಅತ್ಯಂತ ಪ್ರಕ್ಷುಬ್ಧ ವರ್ಷಗಳು:1980-96 (ದಿ ಟರ್ಬಲೆಂಟ್ ಇಯರ್ಸ್‌)’’ಆಂಗ್ಲ ಕೃತಿಯಲ್ಲಿ ಹೇಳಿದ್ದಾರೆ. 1986ರ ಫೆಬ್ರವರಿ 1ರಂದುಅಯೋಧ್ಯೆಯ ವಿವಾದಿತ ನಿವೇಶನವನ್ನು, ತೆರೆದುದು ಆಗಿನ ಪ್ರಧಾನಿ ರಾಜೀವ್‌ಗಾಂಧಿ ತಪ್ಪಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಇಂತಹ ಕಾರ್ಯಗಳನ್ನು ನಡೆಸುವುದನ್ನು ತಪ್ಪಿಸಬಹುದಿತ್ತೆಂದು ಜನತೆ ಭಾವಿಸಿದ್ದಾರೆ’’ ಎಂದು ರಾಷ್ಟ್ರಪತಿ ಕೃತಿಯಲ್ಲಿ ಬರೆದಿದ್ದಾರೆ.
ಬಾಬರಿ ಮಸೀದಿ ನಾಶವು ಸಂಪೂರ್ಣ ನಂಬಿಕೆದ್ರೋಹದ ಕೃತ್ಯವಾಗಿದೆ.ರಾಜಕೀಯ ಉದ್ದೇಶದಿಂದ ನಡೆಸಲಾದ ಮತಿಹೀನ ಹಾಗೂ ಸ್ವೇಚ್ಛಾಚಾರದ ಕೃತ್ಯ ಅದಾಗಿತ್ತು. ಈ ಘಟನೆಯು, ಭಾರತ ಹಾಗೂ ವಿದೇಶದಲ್ಲಿರುವ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ತೀವ್ರವಾದ ಘಾಸಿಯನ್ನುಂಟುಮಾಡಿದೆ. ಸಹಿಷ್ಣು ಹಾಗೂ ಬಹುತ್ವವಾದಿ ದೇಶವೆಂಬ ಭಾರತದ ವರ್ಚಸ್ಸನ್ನು ಈ ಘಟನೆಯು ನಾಶಪಡಿಸಿದೆಯೆಂದು ಪ್ರಣವ್ ತನ್ನ ಕೃತಿಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
 
ರಾಮಮಂದಿರ ನಿರ್ಮಾಣಕ್ಕಾಗಿ ಕಾರ್ಯಕರ್ತರ ಮೂಲಕ ದೇಶಾದ್ಯಂತ ಇಟ್ಟಿಗೆಗಳನ್ನು ಸಂಗ್ರಹಿಸಿ, ಅವುಗಳನ್ನು ಅಯೋಧ್ಯೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ವಿಶ್ವಹಿಂದೂ ಪರಿಷತ್‌ನ ಚಳವಳಿಯು ಕೋಮುಉದ್ವಿಗ್ವತೆಗೆ ಕಾರಣವಾಯಿತೆಂದು ಮುಖರ್ಜಿ ತಿಳಿಸಿದ್ದಾರೆ.
1989-91ರ ಅವಧಿಯು, ಭಾರತೀಯ ಸಮುದಾಯದೊಳಗೆ ಹಿಂಸೆ ಹಾಗೂ ವಿಘಟನೆಗೆ ಕಾರಣವಾಯಿತೆಂದು ಅವರು ಅಭಿಪ್ರಾಯಿಸಿದ್ದಾರೆ. ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದಿಂದಾಗಿ ಸಾಮಾಜಿಕ ಅನ್ಯಾಯವು ಕಡಿಮೆಯಾಯಿತಾದರೂ, ದೇಶದ ವಿವಿಧ ವರ್ಗಗಳ ಧ್ರುವೀಕರಣಕ್ಕೆ ಕಾರಣವಾಯಿತೆಂದು ಅವರು ಹೇಳಿದ್ದಾರೆ.

ಶಾಬಾನೊ ಪ್ರಕರಣದ ತೀರ್ಪಿಗೆ ಸಂಬಂಧಿಸಿ ರಾಜೀವ್ ಕೈಗೊಂಡ ಕ್ರಮಗಳು ಹಾಗೂ ಅವರ ಸರಕಾರ ಜಾರಿಗೊಳಿಸಿದ ಮುಸ್ಲಿಮ್ ಮಹಿಳೆಯರ (ವಿಚ್ಛೇದನ ಕುರಿತ ಮಹಿಳೆಯರ ಹಕ್ಕುಗಳ ರಕ್ಷಣೆ) ವಿಧೇಯಕವು ಭಾರೀ ಟೀಕೆಗೆ ಕಾರಣವಾಯಿತು ಹಾಗೂ ರಾಜೀವ್ ಅವರ ಆಧುನಿಕತಾವಾದಿ ವರ್ಚಸ್ಸಿಗೆ ಕುಂದುಂಟು ಮಾಡಿತೆಂದು ಪ್ರಣವ್ ತನ್ನ ಆತ್ಮಕತೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News