ಪಂಜಿಕಲ್ಲು: ನೇಣು ಬಿಗಿದು ಆತ್ಮಹತ್ಯೆ
ಬಂಟ್ವಾಳ, ಜ. 28: ತಾಲೂಕಿನ ಪಂಜಿಕಲ್ಲು ಗ್ರಾಮದ ಪೀರ್ದೊಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆಯ ಬಾವಿಯ ನೀರೆಳೆಯುವ ರಾಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಲ್ಲಿನ ಪೀರ್ದೊಟ್ಟು ನಿವಾಸಿ ಮೋನಪ್ಪ ಗೌಡ(45) ಆತ್ಮಹತ್ಯೆಗೈದ ವ್ಯಕ್ತಿ. 4 ವರ್ಷಗಳ ಹಿಂದೆಯಷ್ಟೇ ಪುತ್ತೂರಿನ ಅಜಯ ನಗರ ನಿವಾಸಿ ಗೀತಾ ಎಂಬವರನ್ನು ವಿವಾಹವಾಗಿದ್ದ ಮೋನಪ್ಪ ಗೌಡರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಇದೆ.
ಮುಂಬೈನ ಅಂಧೇರಿಯಲ್ಲಿ ಪಾನ್‌ಶಾಪ್ ನಡೆಸುತ್ತಿರುವ ಇವರು ಕಳೆದ ವಾರವಷ್ಟೇ ಇಲ್ಲಿನ ಬಾಲೇಶ್ವರ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕ ಜಾತ್ರೆಗೆಂದು ಊರಿಗೆ ಬಂದಿದ್ದರು ಎನ್ನಲಾಗಿದೆ. ಗುರುವಾರ ಪುತ್ತೂರಿನಲ್ಲಿ ನಡೆಯಲಿದ್ದ ಪತ್ನಿ ಸಂಬಂಧಿಕರೊಬ್ಬರ ವಿವಾಹಕ್ಕೆ ಎರಡು ದಿನಗಳ ಹಿಂದೆಯೇ ಒಟ್ಟಾಗಿ ಪತ್ನಿ ಮನೆಗೆ ತೆರಳಿದ್ದು, ಬುಧವಾರ ಸಂಜೆ ಇವರೊಬ್ಬರೇ ಮನೆಗೆ ವಾಪಸ್ ಬಂದು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಮೃತರ ಸಹೋದರನ ಪತ್ನಿ ನೀರು ತರಲೆಂದು ಬಾವಿ ಬಳಿ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.