ಜಿ.ಪಂ-ತಾಪಂ ಚುನಾವಣೆ; ಮಂಗಳೂರು ತಾಲೂಕು: 3,07,402 ಮತದಾರರು
ಮಂಗಳೂರು, ಜ. 28: ದಕ್ಷಿಣ ಕನ್ನಡ ಜಿಪಂ ಹಾಗೂ ತಾಪಂಗಳಿಗೆ ದ್ವಿತೀಯ ಹಂತದಲ್ಲಿ ನಡೆಯ ಲಿರುವ ಚುನಾವಣೆಗೆ ಸಂಬಂಧಿಸಿ ಪ್ರಸ್ತುತ ಮಂಗಳೂರು ತಾಲೂಕಿನಲ್ಲಿ ಒಟ್ಟು 3,07,402 ಮತದಾರ ರಿದ್ದಾರೆ ಎಂದು ತಾಲೂಕಿನ ಜಿಪಂ ಕ್ಷೇತ್ರಗಳ ಚುನಾವ ಣಾಧಿಕಾರಿ ಯೋಗೀಶ್ ಎಚ್.ಆರ್. ತಿಳಿಸಿದ್ದಾರೆ.
ಮಂಗಳೂರು ತಾಲೂಕು ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಯಲ್ಲಿ ಈ ಮಾಹಿತಿ ನೀಡಿದ ಅವರು, ಮಂಗಳೂರು ತಾಲೂಕಿ ನಲ್ಲಿ ಜಿಲ್ಲಾ ಪಂಚಾಯತ್‌ನ 10 ಕ್ಷೇತ್ರಗಳು ಹಾಗೂ ಮಂಗಳೂರು ತಾಲೂಕಿನ 39 ಕ್ಷೇತ್ರಗಳು ಒಳಪಡುತ್ತವೆ ಎಂದರು.
ದ.ಕ. ಜಿಲ್ಲೆಯ ಮಂಗಳೂರು ತಾಲೂಕು ಉಪವಿಭಾಗಕ್ಕೆ ಚುನಾವಣಾ ವೀಕ್ಷಕರಾಗಿ ಕಿಯೋನಿಕ್ಸ್‌ನ ತಾಂತ್ರಿಕ ನಿರ್ದೇಶಕ ಬಸವರಾಜು ಹಾಗೂ ಪುತ್ತೂರು ಉಪ ವಿಭಾಗಕ್ಕೆ ಬೆಂಗಳೂರಿನ ಆಯುಷ್ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿ ಲೀಲಾವತಿ ಕೆ. ನೇಮಕವಾಗಿದ್ದಾರೆ. ದ.ಕ ಮತ್ತು ತುಮಕೂರು ಜಿಲ್ಲೆಗಳಿಗೆ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ನೇಮಕಗೊಂಡಿದ್ದು, ಫೆ.16ರಿಂದ ಅವರು ದ.ಕ. ಜಿಲ್ಲೆಯಲ್ಲಿ ಕಾರ್ಯಾಚರಿಸಲಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರೂ ಆಗಿರುವ ಯೋಗೀಶ್ ಎಚ್.ಆರ್. ತಿಳಿಸಿದರು.
ಮಂಗಳೂರು ತಾಲೂಕಿನಲ್ಲಿ ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಯಾಗಿ ಮನಪಾ ವಲಯ ಆಯುಕ್ತೆ ಎಂ.ಕೆ. ಪ್ರಮೀಳಾರನ್ನು ನೇಮಕ ಮಾಡಲಾಗಿದೆ. (ದೂ.ಸಂ.: 9482006785). ಮಂಗಳೂರು ತಾಲೂಕಿನಲ್ಲಿ ಒಟ್ಟು 342 ಮತಗಟ್ಟೆಗಳಿದ್ದು, 39 ಸೆಕ್ಟರ್ ಅಧಿಕಾರಿಗಳನ್ನು ಮತ್ತು ಮೂರು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನೇಮಕ ಮಾಡಲಾಗಿದೆ. ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ. (ದೂ.ಸಂ. 2220587) ತೆರೆಯಲಾಗಿದ್ದು, ಚುನಾವಣೆಗೆ ಸಂಬಂಧಪಟ್ಟ ದೂರು ಹಾಗೂ ಮಾಹಿತಿಗಳನ್ನು ಇಲ್ಲಿಂದ ಪಡೆಯಬಹುದು.
ಫೆ.1ರಿಂದ 11ರವರೆಗೆ ಬೆಳಗ್ಗೆ 11 ರಿಂದ 3 ಗಂಟೆಯವರೆಗೆ ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಸಂಬಂಧಿಸಿ ಚುನಾವಣೆಗೆ ಅಭ್ಯರ್ಥಿ ಗಳಿಂದ ನಾಮಪತ್ರ ಸ್ವೀಕರಿಸ ಲಾಗುವುದು. ಚುನಾವಣೆಗೆ ಸಂಬಂಧಿಸಿ ಮಸ್ಟರಿಂಗ್/ ಡಿ ಮಸ್ಟರಿಂಗ್ ಮತ್ತು ಮತಎಣಿಕೆ ಕಾರ್ಯ ಬೊಂದೇಲ್‌ನ ಮಹಾತ್ಮಗಾಂಧಿ ಸೆಂಟಿನರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಮಂಗಳೂರು ತಾಲೂಕಿನ ಜಿಪಂ ಕ್ಷೇತ್ರಗಳಾದ ಕಿನ್ನಿಗೋಳಿ, ಪುತ್ತಿಗೆ, ಶಿರ್ತಾಡಿ, ಕಟೀಲು, ಬಜಪೆ, ಎಡಪದವು, ಗುರುಪುರ, ನೀರುಮಾರ್ಗ, ಕೊಣಾಜೆ ಹಾಗೂ ಸೋಮೇಶ್ವರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಮಿನಿ ವಿಧಾನಸೌಧದ ಮಂಗಳೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಯೋಗೀಶ್ ಎಚ್.ಆರ್. ಅಥವಾ ಸಹಾಯಕ ಚುನಾವಣಾಧಿಕಾರಿ ಜೀನ್ ಮೇರಿ ತಾವ್ರೊ ಅವರಿಗೆ ನಾಮಪತ್ರಗಳನ್ನು ಸಲ್ಲಿಸಬಹುದು.
ಮಂಗಳೂರು ತಾಪಂನ ನೆಲ್ಲಿಕಾರು, ಶಿರ್ತಾಡಿ, ಪಡುಮಾರ್ನಾಡು, ಬೆಳೆವಾಯಿ, ಪಾಲಡ್ಕ, ಕಲ್ಲಮುಂಡ್ಕೂರು, ಬಳ್ಕುಂಜೆ, ಬಡಗ ಎಡಪದವು, ತೆಂಕಮಿಜಾರು, ಹೊಸಬೆಟ್ಟು ಕ್ಷೇತ್ರಗಳಿಗೆ ಸಂಬಂಧಿಸಿ ಅಭ್ಯರ್ಥಿಗಳು ನಾಮಪತ್ರಗಳನ್ನು ಮಿನಿ ವಿಧಾನಸೌಧದ ಮಂಗಳೂರು ತಾಲೂಕು ಕಚೇರಿಯಲ್ಲಿ ತಾಪಂ ಚುನಾವಣಾಧಿಕಾರಿ ಮುಹಮ್ಮದ್ ಇಸಾಕ್, ಸಹಾಯಕ ಚುನಾವಣಾಧಿಕಾರಿ ಮನೋಹರ ಕಾಮತ್‌ಗೆ ಸಲ್ಲಿಸಬಹುದು. ಕಿನ್ನಿಗೋಳಿ, ಕಿಲ್ಪಾಡಿ, ಹಳೆಯಂಗಡಿ, ಚೇಳ್ಯಾರು, ಮೆನ್ನಬೆಟ್ಟು, ಎಕ್ಕಾರು, ಕುಪ್ಪೆಪದವು, ಗಂಜಿಮಠ, ಮೂಡು ಪೆರಾರು, ಕೊಳಂಬೆ ಕ್ಷೇತ್ರಗಳ ಅಭ್ಯರ್ಥಿಗಳು ಚುನಾವಣಾಧಿಕಾರಿ ಹಾಗೂ ಮಂಗಳೂರು ತಹಶೀಲ್ದಾರ್ ಆರ್.ಬಿ. ಶಿವಶಂಕರಪ್ಪ ಅಥವಾ ಸಹಾಯಕ ಚುನಾವಣಾಧಿಕಾರಿ ಹೇಮಚಂದ್ರ ಅವರಿಗೆ ನಾಮಪತ್ರ ಸಲ್ಲಿಸಬಹುದು. ಬಜಪೆ, ಬಾಳ, 62ನೆ ತೋಕೂರು, ಮಳವೂರು, ಮೂಡುಶೆಡ್ಡೆ, ಗುರುಪುರ, ಉಳಾಯಿಬೆಟ್ಟು, ನೀರುಮಾರ್ಗ, ಅಡ್ಯಾರು, ಬೋಳಿಯಾರು ಕ್ಷೇತ್ರಗಳಿಗೆ ಸಂಬಂಧಿಸಿ ಚುನಾವಣಾಧಿಕಾರಿ ಜ್ಞಾನೇಶ್ ಅಥವಾ ಸಹಾಯಕ ಚುನಾವಣಾಧಿಕಾರಿ ಸುಂದರ ನಾಯ್ಕಾರಿಗೆ ನಾಮಪತ್ರ ಸಲ್ಲಿಸಬಹುದು.
ಪಾವೂರು, ಹರೇಕಳ, ಮುನ್ನೂರು, ಕೊಣಾಜೆ, ಬೆಳ್ಮ, ಸೋಮೇಶ್ವರ- 1, ಸೋಮೇಶ್ವರ- 2, ಮಂಜನಾಡಿ, ತಲಪಾಡಿ ಕ್ಷೇತ್ರಗಳಿಗೆ ಸಂಬಂಧಿಸಿ ಅಭ್ಯರ್ಥಿಗಳು ನಾಮಪತ್ರವನ್ನು ಚುನಾವಣಾಧಿಕಾರಿ ಉಸ್ಮಾನ್ ಎ., ಹಾಗೂ ಸಹಾಯಕ ಚುನಾವಣಾಧಿಕಾರಿ ವಸಂತ ಪಾಲನ್‌ರಿಗೆ ಸಲ್ಲಿಸಬಹುದು ಎಂದು ಯೋಗೀಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಚುನಾವಣಾ ಮಾದರಿ ನೀತಿ ಸಂಹಿತೆ ಪರಿಶೀಲನಾ ನೋಡಲ್ ಅಧಿಕಾರಿ ಎಂ.ಕೆ.ಪ್ರಮೀಳಾ, ಮಂಗಳೂರು ತಾಲೂಕಿನ ಜಿ.ಪಂ. ಕ್ಷೇತ್ರಗಳ ಸಹಾ ಯಕ ಚುನಾವಣಾಧಿಕಾರಿ ಜೀನ್ ಮೇರಿ ತಾವ್ರೊ, ಮಂಗಳೂರು ತಹಶೀಲ್ದಾರ್ ಆರ್.ಬಿ. ಶಿವಶಂಕರಪ್ಪ ಉಪಸ್ಥಿತರಿದ್ದರು.
ಪ್ರಸಕ್ತ ಚುನಾವಣೆಗೆ ಸಂಬಂಧಿಸಿ ಜ.23ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿರುವವರನ್ನು ಪರಿಗಣಿಸಿ ಫೆ.1ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು. ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಜ.30ರವರೆಗೆ ಕಾಲಾವಕಾಶವಿದೆ.
-ಯೋಗೀಶ್ ಎಚ್.ಆರ್.